ವಿದ್ಯಾರ್ಥಿಗಳಲ್ಲಿ ಸತ್ಯವನ್ನು ಬಿಂಬಿಸುವ ಕಾರ್ಯ ಶಿಕ್ಷಕರಿಂದಾ ಆಗಲಿ: ಖೈರಾನ್
ಭಟ್ಕಳ: ಜನತಾ ವಿದ್ಯಾಲಯ ಮುರ್ಡೇಶ್ವರದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಎರಡನೇ ದಿನದ ಶೈಕ್ಷಣಿಕ ಸಮ್ಮೇಳನ ವನ್ನು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಜೆ. ಖೈರನ್ ಉದ್ಘಾಟಿಸಿದರು.
ನಂತರ ಉಪನ್ಯಾಸ ನೀಡಿದ ಅವರು ಮಕ್ಕಳಲ್ಲಿ ನಾವು ಸತ್ಯವನ್ನು ಬಿಂಬಿಸುವುದರ ಮಹತ್ವವನ್ನು ಹೇಳುವ ಮೂಲಕ ಸತ್ಯವನ್ನ ಹೇಳುವಂತೆ ಪ್ರೇರೇಪಿಸಬೇಕು. ಶಿಕ್ಷಕರಾದವರು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡರೆ ವಿದ್ಯಾಭ್ಯಾಸದಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಂಡು ಅವರು ಕಲಿಕೆಯಲ್ಲಿ ಹಿಂದಿರುವ ಕಾರಣ ತಿಳಿಸಿ ಹೇಳಿದರೆ ಮುಂದೆ ಅವರು ಉತ್ತಮ ಅಂಕಗಳಿಸಲು ಸಾಧ್ಯವಾಗುವುದು ಎಂದು ಉದಾಹರಣೆ ಸಹಿತ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ವೆಲ್ಪೇರ್ ಟ್ರಸ್ಟ್ ಅಂಕೋಲಾದ ಕಾರ್ಯದರ್ಶಿ ಕೆ.ವಿ. ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಿಕ್ಷಕ ಹಾಗೂ ಸಾಹಿತಿ ಸಂದೀಪ ಭಟ್ಟ ಅವರು ಮಾತನಾಡಿ ನಾವು ಎಷ್ಟೇ ದೊಡ್ಡವರಾದರೂ ಕೂಡಾ ನಾವು ನಮ್ಮವರಿಗಾಗಿ, ನಮ್ಮ ಸಮಾಜಕ್ಕಾಗಿ ಏನು ಮಾಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಶಾಲೆಯ ನಕ್ಷತ್ರಗಳಿದ್ದಂತೆ, ನಕ್ಷತ್ರಗಳು ಆಕಾಶದಲ್ಲಿ ಬೆಳಗಿದಷ್ಟು ಸೊಬಗು ಜಾಸ್ತಿ ಎನ್ನುವಂತೆ ವಿದ್ಯಾರ್ಥಿಗಳ ಸಾಧನೆಯೇ ಶಾಲೆಗೆ ಕೀರ್ತಿ ತರುವಂತದ್ದು ಎಂದರು. ಎಲ್ಲವೂ ಇದ್ದಾಗ ನಾವು ಅದನ್ನು ಉಪಯೋಗಿಸಿಕೊಂಡು ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳದಿದ್ದರೆ ಅದು ಇದ್ದೂ ಪ್ರಯೋಜಕ್ಕೆ ಬಾರದು ಎಂದ ಅವರು ಪ್ರತಿಯೋರ್ವರೂ ಕೂಡಾ ಸಮಾಜಕ್ಕಾಗಿ ಎಚ್ಚರದಿಂದಿ ರಬೇಕು ಎಂದು ಕಿವಿ ಮಾತು ಹೇಳಿದರು.
ನಾವು ಕಲಿತಿರುವ ಶಾಲೆ, ಶಾಲಾ ದಿನಗಳು ನಮಗೆ ನೆನಪಿನ ಒಂದು ಕಣಜವಿದ್ದಂತೆ ಎಂದು ಬಿಂಬಿಸಿದ ಅವರು ನಮ್ಮ ಶಾಲೆ ಯನ್ನು ಎಂದೂ ಮರೆಯಬಾರದು ಎಂದರು. ಅಂದಿನ ಶಾಲಾ ದಿನಗಳನ್ನು ನೆನಪಿಸಿಕೊಂಡರೆ ಇಂದಿಗೂ ಅದೊಂದು ಸುಂದರ ಕ್ಷಣ ಎಂದ ಅವರು ಶಾಲಾ ದಿನಗಳು ನೆನಪಿನ ಒಂದು ದಿಬ್ಬಣವಿದ್ದಂತೆ ಎಂದರು.
ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿ ಸಂಸ್ಥೆಯನ್ನು ಕಟ್ಟಿ ಗ್ರಾಮೀಣ ಭಾಗದಲ್ಲಿಯೂ ಅಂದು ಪ್ರೌಢ ಶಿಕ್ಷಣ ದೊರೆಯುವಂತೆ ಮಾಡಿದ ದಿನಕರ ದೇಸಾಯಿಯವರ ಕಾರ್ಯವನ್ನು ಶ್ಲಾಘಿಸಿದ ಅವರು ಶಿಕ್ಷಣ ಎಂದರೆ ಕೇವಲ ಶಿಕ್ಷಣ ಮಾತ್ರವಲ್ಲ, ಕಲೆಯೊಂದಿಗೆ ಬೆರೆತ ಶಿಕ್ಷಣ ಒಂದು ಉತ್ತಮ ಶಿಕ್ಷಣ ಎಂದರು. ಕಲೆಗೆ ಬೆಲೆಯನ್ನು ನೀಡಿ ಮೊಟ್ಟ ಮೊದಲಿಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಯಕ್ಷಗಾನ ಕಲೆಯನ್ನು ಸೇರಿಸಿಕೊಂಡಿರುವ ಹೆಮ್ಮೆ ಜನತಾ ವಿದ್ಯಾಲಯಕ್ಕಿದೆ ಎಂದೂ ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ತಾಲೂಕಾ ಪಂಚಾಯತ್ ಸದಸ್ಯೆ ಸುಲೋಚನಾ ನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಎಸ್. ಕಾಮತ್, ಸದಸ್ಯ ಮಂಜುನಾಥ ದೇವಡಿಗ ಮಾತನಾಡಿದರು.
ವೇದಿಕೆಯಲ್ಲಿ ಕೆನರಾ ವೆಲ್ಫೇರ್ ಟ್ರಸ್ಟ್ ಸದಸ್ಯ ವಿಷ್ಣು ನಾಯ್ಕಕ, ಶಾಲಾ ಮುಖ್ಯೋಪಾಧ್ಯಾಯ ಟಿ.ಡಿ. ಲಮಾಣಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಗಜಾನನ ದೇವಡಿಗ, ಕುಪ್ಪಯ್ಯ ನಾಯ್ಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಉಪಸ್ಥಿತರಿದ್ದರು.