ಆರ್ಥಿಕ ಹಿಂಜರಿತವನ್ನು ಆರ್‌ಬಿಐ ಮೊದಲೇ ನಿರೀಕ್ಷಿಸಿತ್ತು: ಗವರ್ನರ್ ಶಕ್ತಿಕಾಂತ ದಾಸ್

Update: 2019-12-16 18:10 GMT

ಮುಂಬೈ,ಡಿ.16: ಆರ್ಥಿಕ ಹಿಂಜರಿತವನ್ನು ಮೊದಲೇ ನಿರೀಕ್ಷಿಸಿದ್ದ ಆರ್‌ ಬಿಐ ಈ ವರ್ಷದ ಫೆಬ್ರವರಿಯಿಂದಲೇ ಬಡ್ಡಿ ದರ ಕಡಿತವನ್ನು ಆರಂಭಿಸುವ ಮೂಲಕ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ಸೋಮವಾರ ಇಲ್ಲಿ ತಿಳಿಸಿದ ಬ್ಯಾಂಕಿನ ಗವರ್ನರ್ ಶಕ್ತಿಕಾಂತ ದಾಸ್ ಅವರು,ಬಡ್ಡಿದರಗಳನ್ನು ಇನ್ನಷ್ಟು ಕಡಿತಗೊಳಿಸದಿರಲು ಈ ತಿಂಗಳ ಪೂರ್ವಾರ್ಧದಲ್ಲಿ ಆರ್‌ಬಿಐ ತೆಗೆದುಕೊಂಡ ನಿರ್ಧಾರವು ಸರಿಯಾಗಿತ್ತು ಎನ್ನುವುದನ್ನು ಕಾಲವೇ ಸಾಬೀತು ಗೊಳಿಸುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ವಾರಾಂತ್ಯದಲ್ಲಿ ಪ್ರಕಟಿಸಲಾಗಿರುವ,ವ್ಯಾಪಾರ ಸುಂಕಗಳ ಕುರಿತು ಅಮೆರಿಕ ಮತ್ತು ಚೀನಾ ನಡುವಿನ ಒಪ್ಪಂದವು ಕಾಯಂ ಆಗಿ ಮಂದುವರಿಯಲಿದೆ ಎಂದೂ ಆಶಯ ವ್ಯಕ್ತಪಡಿಸಿದ ಅವರು,ಜಾಗತಿಕ ಬೆಳವಣಿಗೆಯನ್ನು ಉತ್ತೇಜಿಸಲು 2008ರ ಆರ್ಥಿಕ ಹಿಂಜರಿತದ ನಂತರ ತೆಗೆದುಕೊಂಡಂತಹ ಸಂಘಟಿತ ಪ್ರಯತ್ನಗಳು ನಡೆಯಬೇಕಿವೆ ಎಂದು ಒತ್ತಿ ಹೇಳಿದರು.

ಟೈಮ್ಸ್ ಗ್ರೂಪ್ ಏರ್ಪಡಿಸಿದ್ದ ಇಂಡಿಯಾ ಇಕನಾಮಿಕ್ ಕಾಂಕ್ಲೇವ್‌ನಲ್ಲಿ ಮಾತನಾಡಿದ ದಾಸ್, ಫೆಬ್ರವರಿಯಲ್ಲಿ ಆರ್‌ ಬಿಐ ಬಡ್ಡಿದರ ಕಡಿತಗೊಳಿಸಿದಾಗ ಮಾರುಕಟ್ಟೆಯು ಅಚ್ಚರಿಪಟ್ಟುಕೊಂಡಿತ್ತು. ಆದರೆ ಆರ್‌ ಬಿಐ ನಿರ್ಧಾರ ಸರಿಯಾಗಿತ್ತು ಎನ್ನುವುದನ್ನು ಅದು ನಂತರ ಒಪ್ಪಿಕೊಂಡಿತ್ತು. ಬಡ್ಡಿಯನ್ನು ಕಡಿತಗೊಳಿಸದಿರಲು ಆರ್‌ ಬಿಐ ಈ ತಿಂಗಳ ಪೂರ್ವಾರ್ಧದಲ್ಲಿ ನಿರ್ಧರಿಸಿದಾಗಲೂ ಮಾರುಕಟ್ಟೆ ಅಚ್ಚರಿಪಟ್ಟಿತ್ತು ಮತ್ತು ಮಾರುಕಟ್ಟೆಯ ಈ ನಡೆ ತನಗೆ ಸೋಜಿಗವನ್ನುಂಟು ಮಾಡಿದೆ. ಆರ್‌ ಬಿಐನ ಈ ನಿರ್ಧಾರವೂ ಸರಿಯಾಗಿದೆ ಎನ್ನುವುದನ್ನೂ ಕಾಲವೇ ಸಾಬೀತು ಗೊಳಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News