ಬೆಳ್ತಂಗಡಿ: ಪತಿಯಿಂದ ಪತ್ನಿಯ ಕೊಲೆ : ಆರೋಪಿ ಪರಾರಿ
Update: 2019-12-17 22:48 IST
ಬೆಳ್ತಂಗಡಿ : ತಾಲೂಕಿನ ಗೇರುಕಟ್ಟೆಯ ಕಜೆ ಎಂಬಲ್ಲಿ ಪತಿ ಪತ್ನಿಯನ್ನು ಕೊಲೆಗೈದ್ದಾನೆ ಎನ್ನಲಾದ ಘಟನೆ ಮಂಗಳವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಉಮ್ಮರ್ ಫಾರೂಕ್ ಆರೋಪಿ ಎಂದು ತಿಳಿದುಬಂದಿದೆ. ಆತನ ಪತ್ನಿ ಮೂಲತಃ ಪುತ್ತೂರು ಸಾಲ್ಮರದ ತಸ್ಲೀಮ (25) ಮೃತರು.
ತಸ್ಲೀಮ ಅವರ ಮೃತದೇಹ ಶೌಚಾಲಯದಲ್ಲಿ ಪತ್ತೆಯಾಗಿದ್ದು, ದೇಹದಲ್ಲಿ ಅಲ್ಲಲ್ಲಿ ಗಾಯದ ಗುರುತುಗಳಿವೆ ಎಂದು ತಿಳಿದುಬಂದಿದೆ. ಗಾಂಜಾ ವ್ಯಸನಿಯಾಗಿದ್ದ ಉಮರ್ ಫಾರೂಕ್ ಗೆ ಈಕೆ ಮೂರನೇ ಪತ್ನಿ ಎಂದು ಹೇಳಲಾಗುತ್ತಿದೆ. ಈಕೆಗೆ ನಾಲ್ಕು ವರ್ಷದ ಒಂದು ಹೆಣ್ಣು, ಒಂದು ವರ್ಷ ನಾಲ್ಕು ತಿಂಗಳ ಒಂದು ಗಂಡು ಮಗುವಿದೆ.
ಈತನ ಮೇಲೆ ಗಾಂಜಾ ಪ್ರಕರಣ, ವರದಕ್ಷಿಣೆ ಕಿರುಕುಳ ಸೇರಿದಂತೆ ಬೆಳ್ತಂಗಡಿ, ವೇಣೂರು, ಚಿಕ್ಕಮಗಳೂರು ಠಾಣೆಗಳಲ್ಲಿ ಏಳು ಪ್ರಕರಣ ದಾಖಲಾಗಿದ್ದು ರೌಡಿ ಶೀಟರ್ ಎಂದು ತಿಳಿದುಬಂದಿದೆ. ಈತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲಿನಿಂದ ಕೆಲ ದಿನಗಳ ಹಿಂದೆಯಷ್ಟೇ ಜಾಮೀನು ಮೇಲೆ ಹೊರಬಂದಿದ್ದ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.