ಡಿ.19ರಂದು ಮಂಗಳೂರಿನಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ: ಪೊಲೀಸ್ ಕಮಿಷನರ್ ಡಾ. ಹರ್ಷ
ಮಂಗಳೂರು: ಡಿ.18ರ ರಾತ್ರಿ9ರಿಂದ ಡಿ.20ರ ರಾತ್ರಿ 12ರವರೆಗೆ ಸೆ.144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವ ಕಾರಣ ಈ ಅವಧಿಯಲ್ಲಿ ಯಾವುದೇ ಪಕ್ಷ, ಸಂಘಟನೆಗಳ ಪ್ರತಿಭಟನೆಗಳಿಗೆ ಅವಕಾಶವಿಲ್ಲ ಎಂದು ಪೊಲೀಸ್ ಆಯುಕ್ತ ಡಾ. ಪಿಎಸ್ ಹರ್ಷ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಈ ಮಧ್ಯೆ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ವತಿಯಿಂದ ಡಿ.19ರಂದು ಮಧ್ಯಾಹ್ನ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಯಲಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಆಯುಕ್ತರು ಸೆ.144 ಜಾರಿಯಲ್ಲಿರುವ ಅವಧಿಯಲ್ಲಿ ಆಯುಕ್ತಾಲಯ ವ್ಯಾಪ್ತಿಯಲ್ಲಿ ಪ್ರತಿಭಟನಾ ಸಭೆಗಳಿಗೆ ಅವಕಾಶವಿಲ್ಲ. ನಿಷೇಧಾಜ್ಞೆ ಇದ್ದರೂ ಪ್ರತಿಭಟನೆ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಕಮಿಷನರ್ ಡಾ. ಹರ್ಷ ತಿಳಿಸಿದ್ದಾರೆ.
ಡಿ.18ರ ರಾತ್ರಿ 9 ಗಂಟೆಯಿಂದ ಮಂಗಳೂರಿನಲ್ಲಿ ನಿಷೇಧಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.