ಮಂಗಳೂರು: ಪ್ರತಿಭಟನಾನಿರತರ ಮೇಲೆ ಲಾಠಿಚಾರ್ಜ್, ಹಲವರು ವಶಕ್ಕೆ
ಮಂಗಳೂರು, ಡಿ.19: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ನಗರದ ಸ್ಟೇಟ್ ಬ್ಯಾಂಕ್ ಬಳಿ ನಿಷೇಧಾಜ್ಞೆ ಉಲ್ಲಂಘಿಸಿ ಜಮಾಯಿಸಿದ ಗುಂಪೊಂದರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ ಹಲವರನ್ನು ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದೆ.
ಎಸ್ಕೆಎಸ್ಸೆಸ್ಸೆಫ್ ಸಂಘಟನೆಯು ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ಈ ಮಧ್ಯೆ ಸೆ.144 ವಿಧಿಸಿದ ಹಿನ್ನಲೆಯಲ್ಲಿ ಸಂಘಟನೆ ಪ್ರತಿಭಟನೆಯನ್ನು ಮುಂದೂಡಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಸಂದೇಶ ಆಧರಿಸಿ ಕೆಲವವರು ದ.ಕ. ಜಿಲ್ಲಾಧಿಕಾರಿ ಕಚೇರಿಯೆದುರು ಜಮಾಯಿಸಿದ್ದರು. ಪೊಲೀಸರು ಕೂಡಾ ಸಾಕಷ್ಡು ಸಂಖ್ಯೆಯಲ್ಲಿ ಬಂದೋಬಸ್ತ್ ಕಲ್ಪಿಸಿದ್ದರು. ಆದರೂ ಸ್ಟೇಟ್ ಬ್ಯಾಂಕ್ ಬಳಿಯ ಸಿಟಿ ಬಸ್ ನಿಲ್ದಾಣದ ಸಮೀಪ ಯುವಕರು ಘೋಷಣೆ ಕೂಗತೊಡಗಿದರು. ಈ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿ ಗುಂಪನ್ನು ಚದುರಿಸಿದ್ದಾರೆ. ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡದಂತೆ ಮುಖ್ಯಮಂತ್ರಿ ಸೂಚನೆ ನೀಡಿರುವ ಹೊರತಾಗಿಯೂ ಪೊಲೀಸರು ಲಾಠಿಚಾರ್ಜ್ ನಡೆಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.