ಬ್ರೇಕಿಂಗ್ ನ್ಯೂಸ್: ಮಂಗಳೂರಿನಲ್ಲಿ ಪೊಲೀಸ್ ಗುಂಡಿಗೆ ಇಬ್ಬರು ಬಲಿ
ಮಂಗಳೂರು: ಪೌರತ್ವ ಕಾಯ್ದೆ ವಿರೋಧಿಸುತ್ತಿದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಸಂಘರ್ಷದಲ್ಲಿ ಇಬ್ಬರು ಸಾರ್ವಜನಿಕರು ಬಲಿಯಾದ ಘಟನೆ ನಗರದ ಬಂದರ್‌ನಲ್ಲಿ ಇಂದು ಸಂಜೆ ನಡೆದಿದೆ.
ಕಂದಕ್ ನಿವಾಸಿ ಅಬ್ದುಲ್ ಜಲೀಲ್ (42), ಕುದ್ರೋಳಿ ನಿವಾಸಿ ನೌಶಿನ್ (25) ಮೃತಪಟ್ಟವರು.
ಜಲೀಲ್ ನಗರದ ದಕ್ಕೆಯಲ್ಲಿ ಮೀನು ಮಾರುತ್ತಾ ಜೀವನ ಸಾಗಿಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು. ಪತ್ನಿ ಇದ್ದಾರೆ. ಜಲೀಲ್ ಮಕ್ಕಳಿಬ್ಬರನ್ನು ಶಾಲೆಯಿಂದ ಕಂದಕ್‌ನ ಮನೆಗೆ ಕರೆತಂದಿದ್ದಾರೆ. ಮನೆಯ ಹೊರಭಾಗದಲ್ಲಿ ಗದ್ದಲದಂತಹ ಶಬ್ದ ಕೇಳಿ, ಹೊರಬಂದಿದ್ದಾರೆ. ಸಂಜೆ 4:30ರ ಸುಮಾರಿಗೆ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಜಲೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಜಲೀಲ್ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಲೀಲ್ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಇನ್ನೋರ್ವ ಮೃತ ವ್ಯಕ್ತಿ ಕುದ್ರೋಳಿ ನಿವಾಸಿ ನೌಶಿನ್ ಬಂದರ್‌ನಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆ ಬಂದರ್‌ನ ಮಸೀದಿಗೆ ತೆರಳಿ ಪ್ರಾರ್ಥನೆ ಮುಗಿಸಿ ವಾಪಸಾಗುವಾಗ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇಬ್ಬರಿಗೆ ಗಾಯ
ಪೌರತ್ವ ಕಾಯ್ದೆ ವಿರೋಧಿಸುತ್ತಿದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಸಂಘರ್ಷದಲ್ಲಿ ಬಜಾಲ್ ಸಮೀಪದ ಫೈಸಲ್‌ನಗರ ನಿವಾಸಿ ಆಸಿಫ್ (23), ಕಣ್ಣೂರು ನಿವಾಸಿ ನಾಸಿರ್ (26)ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳು ಆಸಿಫ್ ಅವರು ಫೈಸಲ್‌ನಗರದಲ್ಲಿ ಕಾರ್ ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಸಿಫ್ ಕೆಲಸದ ನಿಮಿತ್ತ ಬಂದರ್‌ಗೆ ಬಂದಿದ್ದರು. ಪ್ರಾರ್ಥನೆ ಸಮಯವಾದ್ದರಿಂದ ಮಸೀದಿಗೆ ತೆರಳಿ ವಾಪಸಾಗುವ ಪೊಲೀಸರ ಗುಂಡೇಟು ತಗುಲಿದೆ ಎಂದು ಹೇಳಲಾಗುತ್ತಿದೆ. ಗಂಭೀರ ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೋರ್ವ ಗಾಯಾಳು ನಾಸಿರ್ ನಗರದಲ್ಲಿನ ಪ್ಲಾಸ್ಟಿಕ್ ಲ್ಯಾಂಡ್ ಮಳಿಗೆಯ ಸಿಬ್ಬಂದಿ. ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೆಸ್ಸೆಸ್ ಮನೋಭಾವದ ಪೊಲೀಸರ ಕೃತ್ಯ: ಕುಟುಂಬಸ್ಥರ ಆರೋಪ
ಬಂದರ್, ಕಂದಕ್ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಪೊಲೀಸರ ದಾಳಿ ನಡೆದಿದೆ. ಆ ಪ್ರದೇಶದಲ್ಲಿ ಅಂತಹ ದಾಳಿ ನಡೆಸುವ ಯಾವುದೇ ಪರಿಸ್ಥಿತಿ ಇರಲಿಲ್ಲ. ಸೌಹಾರ್ದದಿಂದ ಇದ್ದ ಪ್ರದೇಶದಲ್ಲಿ ವಿನಾಕಾರಣ ಸಾರ್ವಜನಿಕರ ಮೇಲೆ ಆರೆಸ್ಸೆಸ್ ಮನೋಭಾವದ ಪೊಲೀಸರು ಗುಂಡಿನ ದಾಳಿ ನಡೆಸಿ ಹಲವರ ಪ್ರಾಣಕ್ಕೆ ಕಾರಣರಾಗಿದ್ದಾರೆ ಎಂದು ಗುಂಡೇಟಿಗೆ ಬಲಿಯಾದ ಕಂದಕ್‌ನ ಅಬ್ದುಲ್ ಜಲೀಲ್ ಅವರ ಸಹೋದರ ಯಹ್ಯ ಆರೋಪಿಸಿದ್ದಾರೆ.
ಕಂದಕ್‌ನಲ್ಲಿ ಹಿಂಸಾಚಾರ ಇರಲೇ ಇಲ್ಲ. ದಕ್ಕೆಯಲ್ಲಿ ದುಡಿಮೆ ಮಾಡಿಕೊಂಡಿದ್ದ ಸಹೋದರನ ಸಾವಿನಿಂದಾಗಿ ಆತನ ಕುಟುಂಬ ಇಂದು ಅನಾಥವಾಗಿದೆ. ಪೊಲೀಸರ ಕೃತ್ಯವು ಅಮಾನವೀಯವಾದದ್ದು. ಪೊಲೀಸರು ಗುಂಡಿನ ದಾಳಿ ನಡೆಸುವ ಮೂಲಕ ಅಮಾಯಕರ ಪ್ರಾಣದ ಜತೆ ಆಟವಾಡುತ್ತಿದ್ದಾರೆ. ಮಂಗಳೂರು ಪೊಲೀಸರು ನಡೆಸಿರುವ ಕ್ರೌರ್ಯವನ್ನು ಸುಶಿಕ್ಷಿತ ಸಮಾಜ ಒಪ್ಪುವುದಿಲ್ಲ ಎಂದು ಆರೋಪಿಸಿದರು.