×
Ad

ವಿಡಿಯೋ ಚಿತ್ರೀಕರಿಸಿದ್ದ ಪತ್ರಕರ್ತನ ವಿರುದ್ಧದ ಆರೋಪ ಕೈಬಿಟ್ಟ ಪೊಲೀಸರು

Update: 2019-12-19 20:53 IST

ಹೊಸದಿಲ್ಲಿ,ಡಿ.19: ಉತ್ತರ ಪ್ರದೇಶದ ಮಿರ್ಝಾಪುರ ಜಿಲ್ಲೆಯಲ್ಲಿ ಶಾಲಾಮಕ್ಕಳಿಗೆ ಮಧ್ಯಾಹ್ನದೂಟದಲ್ಲಿ ಉಪ್ಪು ಮತ್ತು ರೊಟ್ಟಿಯನ್ನು ನೀಡುತ್ತಿದ್ದುದನ್ನು ವರದಿ ಮಾಡಿದ್ದ ಪತ್ರಕರ್ತನ ವಿರುದ್ಧದ ಆರೋಪಗಳನ್ನು ಪೊಲೀಸರು ಕೈಬಿಟ್ಟಿದ್ದಾರೆ.

ಸ್ಥಳೀಯ ಹಿಂದಿ ದೈನಿಕ ಜನಸಂದೇಶ ಟೈಮ್ಸ್‌ನ ವರದಿಗಾರ ಪವನ್ ಜೈಸ್ವಾಲ್ ಚಿತ್ರೀಕರಿಸಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಅವರ ವಿರುದ್ಧ ಕ್ರಿಮಿನಲ್ ಒಳಸಂಚು ಆರೋಪವನ್ನು ಹೊರಿಸಿದ್ದರು.

ತನಿಖೆಯ ಸಂದರ್ಭದಲ್ಲಿ ಜೈಸ್ವಾಲ್ ವಿರುದ್ಧ ಸಾಕ್ಷಾಧಾರ ಸಿಕ್ಕಿಲ್ಲ,ಹೀಗಾಗಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದೇವೆ ಮತ್ತು ಪ್ರಕರಣದಲ್ಲಿಯ ಇನ್ನೋರ್ವ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದೇವೆ ಎಂದು ಎಸ್‌ಪಿ ಧರ್ಮವೀರ ಸಿಂಗ್ ತಿಳಿಸಿದರು.

ಆಗಸ್ಟ್‌ನಲ್ಲಿ ಜೈಸ್ವಾಲ್ ಚಿತ್ರೀಕರಿಸಿದ್ದ ವೀಡಿಯೊ ಮಿರ್ಝಾಪುರ ಜಿಲ್ಲೆಯ ಜಮಾಲಪುರ ಬ್ಲಾಕ್‌ನ ಸಿಯೂರ್ ಪ್ರಾಥಮಿಕ ಶಾಲೆಯ ಸುಮಾರು 100 ವಿದ್ಯಾರ್ಥಿಗಳು ಮಧ್ಯಾಹ್ನದೂಟದಲ್ಲಿ ರೊಟ್ಟಿಯನ್ನು ಉಪ್ಪಿನೊಂದಿಗೆ ತಿನ್ನುತ್ತಿರುವ ದೃಶ್ಯ ಸೆರೆಯಾಗಿತ್ತು ಮತ್ತು ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ವೀಡಿಯೊವನ್ನು ಗಮನಿಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರಕಾರಕ್ಕೆ ನೋಟಿಸನ್ನೂ ಹೊರಡಿಸಿತ್ತು.

ಜೈಸ್ವಾಲ್ ಮತ್ತು ಗ್ರಾಮದ ಮುಖ್ಯಸ್ಥ ರಾಜಕುಮಾರ ಪಾಲ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು,ಮಧ್ಯಾಹ್ನದೂಟ ತಯಾರಿಕೆಗೆ ಸಾಮಗ್ರಿಗಳ ಕೊರತೆಯಿರುವುದು ಗೊತ್ತಿದ್ದೂ ಜೈಸ್ವಾಲ್ ಮೂಲಕ ವೀಡಿಯೊ ಚಿತ್ರೀಕರಿಸಲು ಪಾಲ್ ಒಳಸಂಚು ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News