ದುಬೈ : ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಗೆ 'ಅಪ್ ಕಮಿಂಗ್ ಇನ್ಸ್ ಟಿಟ್ಯೂಟ್ ಆಫ್ ದಿ ಇಯರ್' ಪ್ರಶಸ್ತಿ
ಉಡುಪಿ : ದುಬೈ ಅಮಿಟಿ ಯುನಿವರ್ಸಿಟಿಯಲ್ಲಿ ಇತ್ತೀಚಿಗೆ ನಡೆದ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಸ್ಕೂಲ್ ಅವಾರ್ಡ್ಸ್ 2019 ಕಾರ್ಯಕ್ರಮದಲ್ಲಿ ಶಿರೂರಿನ ಖ್ಯಾತ ಶಿಕ್ಷಣ ಸಂಸ್ಥೆ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಹಾಗು ಪಿಯು ಕಾಲೇಜಿಗೆ ಅಪ್ ಕಮಿಂಗ್ ಇನ್ಸ್ ಟಿಟ್ಯೂಟ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಐಎಸ್ಎ ಜಗತ್ತಿನ ಪ್ರಮುಖ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಂಸ್ಥೆಗಳನ್ನು ಗುರುತಿಸುತ್ತದೆ.
ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗು ಗ್ರೀನ್ ವ್ಯಾಲಿಯ ಟ್ರಸ್ಟಿ ಮೊಹಮ್ಮದ್ ಮೀರಾನ್ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಮೀರಾನ್ ಅವರು "ಕಳೆದ ಎರಡು ದಶಕಗಳಲ್ಲಿ ಗ್ರೀನ್ ವ್ಯಾಲಿ ಭಾರೀ ಪ್ರಗತಿ ಸಾಧಿಸಿದೆ. ಇದರ ಹಿಂದೆ ಬಹಳ ಶ್ರಮ ಹಾಗು ತ್ಯಾಗವಿದೆ. ಗ್ರೀನ್ ವ್ಯಾಲಿಯ ಟ್ರಸ್ಟ್ ನಲ್ಲಿ ಇನ್ನೂ ನಾಲ್ವರು ಟ್ರಸ್ಟಿಗಳಿದ್ದಾರೆ. ಆದರೆ ಇದರ ಪ್ರಮುಖ ಶ್ರೇಯ ಸಲ್ಲಬೇಕಾದ್ದು ಶಾಲೆಯ ಮಾಜಿ ವ್ಯವಸ್ಥಾಪಕ ಟ್ರಸ್ಟಿ ದಿವಂಗತ ಸಯ್ಯದ್ ಅಬ್ದುಲ್ ಖಾದರ್ ಬಾಶು ಸಾಹೇಬ್ ಅವರಿಗೆ. ಈ ಶಾಲೆ ಈ ಹಂತಕ್ಕೆ ಬಂದು ತಲುಪಲು ಅವರ ಅಪಾರ ಶ್ರಮವಿದೆ. ಶಾಲೆಯ ಪ್ರಾಂಶುಪಾಲರು, ಕೋ ಆರ್ಡಿನೇಟರ್, ಅಧ್ಯಾಪಕ ವೃಂದ, ಆಡಳಿತ ಸಿಬ್ಬಂದಿ ಹಾಗು ವಿದ್ಯಾರ್ಥಿಗಳ ಸಹಕಾರದಿಂದ ಶಾಲೆ ಇಂದು ನಾಡಿನ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ" ಎಂದು ಹೇಳಿದರು.
"ಗ್ರೀನ್ ವ್ಯಾಲಿ ಜಾತ್ಯತೀತ ನಿಲುವುಗಳನ್ನು ಪ್ರತಿಪಾದಿಸುವ ಹಾಗು ಎಲ್ಲ ಧರ್ಮಗಳ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆ. ನಮ್ಮ ಪ್ರಾಂಶುಪಾಲ ಡಾ. ಜಾನ್ ಮ್ಯಾಥ್ಯು ಅವರು ಉನ್ನತ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿಗಳನ್ನು ಪಡೆದು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಪಡೆದವರು. ವಿದ್ಯಾರ್ಥಿಗಳ ಸಂತುಲಿತ ಬೆಳವಣಿಗೆಗಾಗಿ ಅತ್ಯಾಧುನಿಕ ಶೈಕ್ಷಣಿಕ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಪರಿಣಿತರು. ಜೊತೆಗೆ ಅವರಿಗೆ ಅತ್ಯಂತ ಅನುಭವಿ ಶಿಕ್ಷಕ ವೃಂದದ ಸಹಕಾರವಿದೆ . ಪ್ರತಿ ವರ್ಷ ಅತ್ಯುತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿರುವ ಗ್ರೀನ್ ವ್ಯಾಲಿ ಅಮೇರಿಕಾದ ನಾಸಾ ಜಾನ್ ಎಫ್ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಅಧ್ಯಯನ ಭೇಟಿಗೆ ಕರೆದುಕೊಂಡು ಹೋದ ನಮ್ಮ ಪ್ರದೇಶದ ಪ್ರಪ್ರಥಮ ಶಿಕ್ಷಣ ಸಂಸ್ಥೆ " ಎಂದೂ ಮೀರಾನ್ ಸಾಹೇಬ್ ಅವರು ಹೇಳಿದರು.
2001 ರಲ್ಲಿ ಶಿರೂರು ಮೂಲದ ಐವರು ಅನಿವಾಸಿ ಭಾರತೀಯರು ಸೇರಿ ಊರಿನ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಗ್ರೀನ್ ವ್ಯಾಲಿ ಶಾಲೆಯನ್ನು ಪ್ರಾರಂಭಿಸಿದರು. ಶಾಲೆಯ ಆಡಳಿತ ಟ್ರಸ್ಟಿ ಸಯ್ಯದ್ ಅಬ್ದುಲ್ ಖಾದರ್ ಬಾಶು ಅವರ ವಿಶೇಷ ಮುತುವರ್ಜಿ ಹಾಗು ಇತರ ಟ್ರಸ್ಟಿಗಳ ಸಹಕಾರದಿಂದ ಕೇವಲ ನೂರು ಮಕ್ಕಳೊಂದಿಗೆ ಪ್ರಾರಂಭವಾದ ಈ ಶಿಕ್ಷಣ ಸಂಸ್ಥೆ ಇಂದು ದೇಶದ ವಿವಿಧೆಡೆಗಳ, ಎಲ್ಲ ಧರ್ಮಗಳ 1400 ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ ಹಾಗು ನಾಡಿನ ಪ್ರಮುಖ ವಸತಿ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ ಎಂದು ಮೀರಾನ್ ಅವರು ಹೇಳಿದರು.
"ಸಂಸ್ಥೆಯ ಹಾಲಿ ಅಧ್ಯಕ್ಷ ಡಾ. ಸಯ್ಯದ್ ಹಸನ್ ಸಾಹೇಬ್ , ಕಾರ್ಯದರ್ಶಿ ಹಾಗು ಸಹ ಆಡಳಿತ ಟ್ರಸ್ಟಿ ಸಯ್ಯದ್ ಇಬ್ರಾಹಿಂ ಸಾಹೇಬ್ , ಹಿರಿಯ ಉಪಾಧ್ಯಕ್ಷ ಹಾಗು ಖಜಾಂಜಿ ಮೊಹಮ್ಮದ್ ಯಾಹ್ಯಾ ಖಾಝಿ ಅವರು ಶಾಲೆಯನ್ನು ಇಡೀ ದೇಶದಲ್ಲಿ ಮಾದರಿ ಶಾಲೆಯಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ. ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಜಗತ್ತಿನ ಹಲವೆಡೆ ಯಶಸ್ವಿ ವೃತ್ತಿ ಜೀವನ ನಡೆಸುತ್ತಿದ್ದಾರೆ " ಎಂದು ಮೀರಾನ್ ಅವರು ಹೇಳಿದರು.
ಐ ಎಸ್ ಎ ಪ್ರಶಸ್ತಿಗೆ ಈ ವರ್ಷ ಸುಮಾರು 40 ದೇಶಗಳಿಂದ 8,422 ಅರ್ಜಿ ಬಂದಿದ್ದವು. ಸುಮಾರು 50 ಕ್ಕೂ ಹೆಚ್ಚು ದೇಶಗಳ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.