×
Ad

ಅಖಿಲ ಭಾರತ ಅಂತರ ವಿವಿ ಕಬಡ್ಡಿ ಟೂರ್ನಿ : ಗೊಂಡ್ವಾನಾ ವಿವಿಯನ್ನು ಸೋಲಿಸಿದ ಮಂಗಳೂರು ವಿವಿ

Update: 2019-12-19 22:07 IST

ಉಡುಪಿ, ಡಿ.19: ಭಾರತೀಯ ವಿವಿಗಳ ಸಂಘದ ಆಶ್ರಯದಲ್ಲಿ ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಗಳ ಸಹಯೋಗದೊಂದಿಗೆ ನಗರದ ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ನಡೆದಿರುವ ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಬುಧವಾರ ಪಂದ್ಯವೊಂದರಲ್ಲಿ ಆತಿಥೇಯ ಮಂಗಳೂರು ವಿವಿ ತಂಡ,ಪಶ್ಚಿಮ ವಲಯದ ಗಡ್‌ಚಿರೋಲಿಯ ಗೊಂಡ್ವಾನಾ ವಿವಿಯನ್ನು 95-16 ಅಂಕಗಳ ಅಂತರದಿಂದ ಬಗ್ಗುಬಡಿದು ಪೂರ್ಣ ಎರಡು ಅಂಕಗಳನ್ನು ಸಂಪಾದಿಸಿತು.

ಮಂಗಳವಾರ ತನ್ನ ಆರಂಭಿಕ ಪಂದ್ಯದಲ್ಲಿ ವಾರಣಾಸಿಯ ಎ.ಜಿ.ಕೆ.ವಿ.ಪಿ. ವಿರುದ್ಧ ರೋಮಾಂಚಕಾರಿ (37-37) ಟೈ ಸಾಧಿಸಿದ್ದ ದಕ್ಷಿಣ ವಲಯ ಚಾಂಪಿಯನ್ ತಂಡವಾದ ಮಂಗಳೂರು ವಿವಿ, ಇಂದು ನಿಸ್ಸಹಾಯಕ ಗೊಂಡ್ವಾನಾ ವಿವಿಯನ್ನು 79 ಅಂಕಗಳ ಅಂತರದಿಂದ ಭರ್ಜರಿಯಾಗಿ ಹಿಮ್ಮೆಟ್ಟಿಸಿ ಒಟ್ಟು ಮೂರು ಅಂಕಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಯಿತು.

ಬಿ ಗುಂಪಿನ ಅಗ್ರಸ್ಥಾನಕ್ಕಾಗಿ ಮಂಗಳೂರು ವಿವಿ ನಾಳೆ ಗುಂಪಿನ ಬಲಿಷ್ಠ ತಂಡವಾಗಿರುವ ಉತ್ತರ ವಲಯ ಕುರುಕ್ಷೇತ್ರದ ಕುರುಕ್ಷೇತ್ರ ವಿವಿಯನ್ನು ಎದುರಿಸಲಿದೆ. ಕುರುಕ್ಷೇತ್ರ ವಿವಿ, ತಾನಾಡಿರುವ ಎರಡೂ ಪಂದ್ಯಗಳನ್ನು ಜಯಿಸಿದ್ದು, ಒಟ್ಟು 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
 ನಿನ್ನೆ ರಾತ್ರಿ ಪಶ್ಚಿಮ ವಲಯದ ನಾಲ್ಕನೇ ಸ್ಥಾನಿ ಗೊಂಡ್ವಾನಾ ವಿವಿಯನ್ನು 76-23 ಅಂಕಗಳಿಂದ ಪರಾಭವಗೊಳಿಸಿದ್ದ ಕುರುಕ್ಷೇತ್ರ ವಿವಿ, ಇಂದು ವಾರಣಾಸಿಯ ಎಂಜಿಕೆವಿಪಿ ತಂಡವನ್ನು 42-33 ಅಂಕಗಳ ಅಂತರದಿಂದ ಸೋಲಿಸಿ ಗುಂಪಿನಲ್ಲಿ ಅಜೇಯವಾಗುಳಿಯಿತು.

ನಿನ್ನೆ ರಾತ್ರಿ ಎ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಪಶ್ಚಿಮ ವಲಯದ ಚೆನ್ನೈ ಎಸ್.ಆರ್.ಎಂ.ವಿವಿ, ಬಿಹಾರ ದರ್ಬಾಂಗದ ಎಲ್.ಎನ್.ಮಿಥಿಲಾ ವಿವಿಯನ್ನು 44-24ರ ಅಂತರದಿಂದ ಹಿಮ್ಮೆಟ್ಟಿಸಿದರೆ, ಸಿ ಗುಂಪಿನಲ್ಲಿ ತಮಿಳು ನಾಡು ತಿರುನಲ್ವೇಲಿಯ ಎಂ.ಎಸ್. ವಿವಿ, ಛತ್ತೀಸ್‌ಗಢ ರಾಯ್‌ಪುರದ ರವಿಶಂಕರ್ ವಿವಿಯನ್ನು 49-21 ಅಂಕಗಳಿಂದ ಹಾಗೂ ಡಿ ಗುಂಪಿನಲ್ಲಿ ಉತ್ತರ ವಲಯ ಭಿವಾನಿಯ ಸಿ.ಬಿ.ಎಲ್. ವಿವಿ ತಂಡ, ಮುಂಬೈಯ ಯುನಿವರ್ಸಿಟಿ ಆಫ್ ಮುಂಬಯಿ ವಿರುದ್ಧ 39-26 ಅಂಕಗಳ ಜಯಗಳಿಸಿತ್ತು.

ಬುಧವಾರ ಬೆಳಗ್ಗೆ 9ನೇ ಪಂದ್ಯದಲ್ಲಿ ರೋಹ್ಟಕ್‌ನ ಎಂ.ಡಿ.ವಿವಿ ಎ ಗುಂಪಿನ ಪಂದ್ಯದಲ್ಲಿ ಚೆನ್ನೈನ ಎಸ್.ಆರ್.ಎಂ.ವಿವಿಯನ್ನು 68-17 ಅಂಕಗಳ ಅಂತರದಿಂದ ಸುಲಭವಾಗಿ ಸೋಲಿಸಿ ಸತತ ಎರಡನೇ ಜಯ ದಾಖಲಿಸಿತು. ಈ ಮೂಲಕ ಅದು ನಾಲ್ಕು ಅಂಕಗಳೊಂದಿಗೆ ಅಜೇಯವಾಗುಳಿದು ಗುಂಪಿನಲ್ಲಿ ಅಗ್ರಸ್ಥಾನಿಯಾಗಿದೆ.

ಸಿ ಗುಂಪಿನಲ್ಲಿ ರಾಜಸ್ಥಾನ ಕೋಟದ ಯುನಿವರ್ಸಿಟಿ ಆಫ್ ಕೋಟಾ, ಛತ್ತೀಸ್‌ಗಢ ರಾಯಪುರದ ರವಿಶಂಕರ್ ವಿವಿಯನ್ನು 47-35ರ ಅಂತರದಿಂದ, ಡಿ ಗುಂಪಿನಲ್ಲಿ ಉತ್ತರ ಪ್ರದೇಶ ಜಾನುಪುರದ ವಿ.ಬಿ.ಎಸ್.ವಿವಿ, ಭಿವಾನಿಯ ಸಿ.ಬಿ.ಎಲ್. ವಿವಿಯನ್ನು 42-32ರ ಅಂತರದಿಂದ ಸೋಲಿಸಿದವು.

ಎ ಗುಂಪಿನ ಟೂರ್ನಿಯ 13ನೇ ಪಂದ್ಯದಲ್ಲಿ ಕೊಲ್ಹಾಪುರದ ಶಿವಾಜಿ ವಿವಿ ತಂಡ, ಬಿಹಾರ ದರ್ಭಾಂಗಾದ ಎಲ್.ಎನ್.ಮಿಥಿಲಾ ವಿವಿಯನ್ನು 60-26, ಸಿ ಗುಂಪಿನಲ್ಲಿ ಅಮೃತಸರದ ಜಿ.ಎನ್.ಡಿ.ವಿವಿ, ತಿರುನಲ್ವೇಲಿಯ ಎಂ.ಎಸ್. ವಿವಿಯನ್ನು 53-23 ಹಾಗೂ ಡಿ ಗುಂಪಿನಲ್ಲಿ ಚೆನ್ನೈನ ವೆಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್, ಟೆಕ್ನಾಲಜಿ ಎಂಡ್ ಅಡ್ವಾನ್ಸ್‌ಡ್ ಸ್ಟಡೀಸ್ ತಂಡ, ಮುಂಬಯಿ ಯುನಿವರ್ಸಿಟಿ ಆಫ್ ಮುಂಬಯಿಯನ್ನು 44-23 ಅಂಕಗಳ ಅಂತರದಿಂದ ಹಿಮ್ಮೆಟ್ಟಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News