ಹಿಂದೂ ವಲಸಿಗರಿಗೆ ಎಲ್ಲಿ ಜಾಗ ನೀಡುತ್ತೀರಿ: ಕೇಂದ್ರ ಸರಕಾರಕ್ಕೆ ಉದ್ಧವ್ ಠಾಕ್ರೆ ಪ್ರಶ್ನೆ

Update: 2019-12-19 16:49 GMT

ಮುಂಬೈ, ಡಿ.19: ಪೌರತ್ವ ಕಾಯ್ದೆಯ ವಿಷಯದಲ್ಲಿ ಕೇಂದ್ರ ಸರಕಾರವನ್ನು ಟೀಕಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಹಿಂದು ವಲಸಿಗರನ್ನು ದೇಶದಲ್ಲಿ ಹೇಗೆ ಮತ್ತು ಎಲ್ಲಿ ನೆಲೆಗೊಳಿಸಲು ಸರಕಾರ ಬಯಸಿದೆ ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. “ನನ್ನ ಪ್ರಕಾರ ಈ ಬಗ್ಗೆ ಕೇಂದ್ರ ಸರಕಾರ ಯಾವುದೇ ಯೋಜನೆ ಹೊಂದಿಲ್ಲ. ಡಿಸೆಂಬರ್ 1ರಂದು ವಿಧಾನಸೌಧದ ಜಂಟಿ ಸದನವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜ್ಯಪಾಲರು ಪೌರತ್ವ ಕಾಯ್ದೆಯನ್ನು ಖಂಡಿಸಿದ್ದಾರೆ” ಎಂದು ಠಾಕ್ರೆ ಹೇಳಿದರು.

ಲೋಕಸಭೆಯಲ್ಲಿ ಪೌರತ್ವ ಕಾಯ್ದೆಯನ್ನು ಶಿವಸೇನೆ ಬೆಂಬಲಿಸಿತ್ತು. ಆದರೆ ರಾಜ್ಯಸಭೆಯಲ್ಲಿ ಈ ಬಗ್ಗೆ ಮತದಾನ ನಡೆದಾಗ ಸಭಾತ್ಯಾಗ ಮಾಡಿತ್ತು. ಇದೇ ವೇಳೆ, ಕರ್ನಾಟಕದ ಜತೆಗಿನ ಗಡಿವಿವಾದವನ್ನು ಪ್ರಸ್ತಾವಿಸಿದ ಠಾಕ್ರೆ, ಈ ವಿಷಯದಲ್ಲಿ ಕೇಂದ್ರ ಸರಕಾರ ಪಕ್ಷಪಾತದ ನಿಲುವು ತಳೆದಿದೆ ಎಂದು ಆರೋಪಿಸಿದರು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಮಹಾರಾಷ್ಟ್ರದ ವಾದವಾಗಿದೆ. ಹಸುಗಳ ಬಗ್ಗೆ ಹಿಂದುತ್ವದ ಪ್ರತಿಪಾದಕ ವಿಡಿ ಸಾವರ್ಕರ್ ಹೊಂದಿದ್ದ ಅಭಿಪ್ರಾಯದ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಠಾಕ್ರೆ ಬಿಜೆಪಿಯನ್ನು ಒತ್ತಾಯಿಸಿದರು. ಹಸು ಉಪಯುಕ್ತ ಪ್ರಾಣಿಯಾಗಿದೆ. ಆದರೆ ಅದು ಉಪಯುಕ್ತವಲ್ಲ ಎಂದಾಗ ಅದನ್ನು ವಧಿಸಿ ಮಾಂಸ ತಿನ್ನಬಹುದು ಎಂಬ ಅಭಿಪ್ರಾಯವನ್ನು ಸಾವರ್ಕರ್ ಹೊಂದಿದ್ದರು ಎನ್ನಲಾಗಿದೆ.

ಕೇಂದ್ರ ಸರಕಾರದ ಹಲವು ಅನಗತ್ಯ ಮತ್ತು ಅವಸರದ ನಿರ್ಧಾರಗಳಿಂದಾಗಿ ಮಹಾರಾಷ್ಟ್ರದ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ನೋಟು ರದ್ದತಿ ಹಾಗೂ ಜಿಎಸ್‌ಟಿಯ ತರಾತುರಿ ಅನುಷ್ಠಾನದಿಂದಾಗಿ ‘ಮ್ಯಾಗ್ನೆಟಿಕ್ ಮಹಾರಾಷ್ಟ್ರ’ ಮತ್ತಿತರ ಕಾರ್ಯಕ್ರಮಗಳು ಹೂಡಿಕೆದಾರರನ್ನು ಆಕರ್ಷಿಸಲು ವಿಫಲವಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News