ಮಂಗಳೂರಿನಲ್ಲಿ ಕೇರಳ ಪತ್ರಕರ್ತರು ಪೊಲೀಸ್ ವಶಕ್ಕೆ : ಕೇರಳದಲ್ಲಿ ಪ್ರತಿಭಟನೆ
ಮಂಗಳೂರು , ಡಿ. 20 : ಪೌರತ್ವ ತಿದ್ದುಪಡಿ ವಿರುದ್ಧ ಪ್ರತಿಭಟನೆ ಬಳಿಕ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ಮೃತದೇಹಗಳನ್ನು ಇಟ್ಟಿರುವ ನಗರದ ವೆನ್ ಲಾಕ್ ಆಸ್ಪತ್ರೆಯಲ್ಲಿ ವರದಿ ಮಾಡಲು ತೆರಳಿದ್ದ ಕೇರಳ ಪತ್ರಕರ್ತರ ತಂಡವನ್ನು ವಶಕ್ಕೆ ತೆಗೆದುಕೊಂಡಿರುವ ವಿರುದ್ಧ ಕೇರಳದಲ್ಲಿ ಪತ್ರಕರ್ತರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.
ವರದಿ ಮಾಡುತ್ತಿದ್ದ ಮೀಡಿಯಾ ವನ್ ವರದಿಗಾರ ಶಬ್ಬೀರ್ ಉಮರ್ ಮತ್ತು ವೀಡಿಯೊಗ್ರಾಫರ್ ಅನೀಶ್ ಕಾಞಂಗಾಡ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾತೃಭೂಮಿ 24, ಏಷ್ಯಾನೆಟ್ ತಂಡವನ್ನೂ ವಶಕ್ಕೆ ಪಡೆದಿದ್ದು, ಅವರನ್ನು ಕಮೀಷನರ್ ಕಾರ್ಯಾಲಯಕ್ಕೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಪರಿಸರದಿಂದ ವರದಿಗಾರರನ್ನು ಬಂಧಿಸಲಾಗಿದ್ದು, ಇವರ ಬಳಿ ಇದ್ದ ಕ್ಯಾಮೆರಾ ಮುಂತಾದ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೀಡಿಯಾ ವನ್ ವರದಿ ಮಾಡಿದೆ.
ಬಲವಂತದಿಂದ ವರದಿಗಾರಿಕೆಯನ್ನು ತಡೆಯಲಾಗಿದೆ ಎಂದು ಮೀಡಿಯಾ ವನ್, ಮಾತೃಭೂಮಿ 24, ಏಷ್ಯಾನೆಟ್ ಮುಂತಾದ ಚಾನೆಲ್‌ಗಳ ಹತ್ತು ಮಂದಿಯನ್ನೊಳಗೊಂಡ ತಂಡ ಮೀಡಿಯಾ ವನ್‌ಗೆ ತಿಳಿಸಿದೆ. ಸಂಸ್ಥೆಯ ಗುರುತು ಚೀಟಿ ತೋರಿಸಿದರೂ ಸರಕಾರದಿಂದ ನೀಡುವ ಗುರುತು ಚೀಟಿ ಇದ್ದರೆ ಮಾತ್ರ ವರದಿ ಮಾಡಲು ಅವಕಾಶ ನೀಡುವುದಾಗಿ ನಗರ ಪೊಲೀಸರು ಹೇಳಿ ವರದಿಗಾರರನ್ನು ವಶಕ್ಕೆ ಪಡೆದಿದ್ದರೆ ಎಂದು ಹೇಳಲಾಗಿದೆ.
ಮಂಗಳೂರು ನಗರ ಪೊಲೀಸರ ಈ ಕ್ರಮದ ವಿರುದ್ಧ ಕೇರಳದ ವಿವಿಧೆಡೆ ಪತ್ರಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.