ಸರಕಾರದ ಕೃಪಾಪೋಷಿತ ಗೋಲಿಬಾರ್: ಕಾಂಗ್ರೆಸ್ ಆರೋಪ
ಮಂಗಳೂರು, ಡಿ. 20: ನಗರದಲ್ಲಿ ಗುರುವಾರ ನಡೆದ ಅಹಿತಕರ ಘಟನೆಗಳು ರಾಜ್ಯದ ಬಿಜೆಪಿ ಸರಕಾರ ಕೃಪಾಪೋಷಿತ ಗೋಲಿಬಾರ್ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿನ್ನೆ ಯಾವುದೇ ಕಾರಣಕ್ಕೂ ಅಶ್ರುವಾಯು ಸಿಡಿಸುವುದಾಗಲಿ, ಗೋಲಿಬಾರ್ ಮಾಡುವಂತಹ ಪರಿಸ್ಥಿತಿಯೇ ಇರಲಿಲ್ಲ. ಹಾಗಿದ್ದರೂ ಇಬ್ಬರು ಅಮಾಯಕರ ಪ್ರಾಣವನ್ನು ತೆಗೆದ ಪೊಲೀಸರ ದೌರ್ಜನ್ಯವನ್ನು ಪಕ್ಷ ಖಂಡಿಸುವುದಾಗಿ ಹೇಳಿದರು.
ಪೊಲೀಸ್ ಗೋಲಿಬಾರ್‌ಗೆ ಬಲಿಯಾದ ಇಬ್ಬರು ಯುವಕರು ಕೂಡಾ ಯಾವುದೇ ಪಕ್ಷ ಅಥವಾ ಸಂಘಟನೆಗೆ ಸೇರಿದವರಲ್ಲ. ಪ್ರತಿಭಟನೆಗಾಗಿಯೂ ಸೇರಿದವರಲ್ಲ. ಅಮಾಯಕರನ್ನು ಬಲಿ ಪಡೆಯಲಾಗಿದೆ ಎಂದು ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರು ಯಾವುದೇ ಗಾಳಿ ಮಾತಿಗೆ ಕಿವಿಕೊಡದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಅವರು, ಎನ್‌ಆರ್‌ಸಿ, ಸಿಸಿಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರವೇ ಲಾಠಿಚಾರ್ಜ್, ಗೋಲಿಬಾರ್‌ನಂತಹ ಕೃತ್ಯಗಲು ನಡೆಯುತ್ತಿವೆ. ಪೊಲೀಸರನ್ನು ಸಂಪೂರ್ಣವಾಗಿ ಹತೋಟಿಗೆ ಪಡೆದು ಈ ಕೃತ್ಯವನ್ನು ನಡೆಸಲಾಗಿದೆ ಎಂದು ಹರೀಶ್ ಕುಮಾರ್ ಆರೋಪಿಸಿದರು.
ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ದೇಶದ ಹಲವು ಕಡೆಗಳಲ್ಲಿ ಲಕ್ಷಾಂತರ ಜನರು ಬೀದಿಗೆ ಬಂದು ಪ್ರತಿಭಟಿಸುತ್ತಿದ್ದಾರೆ. ಆದರೆ ಎಲ್ಲಿಯೂ ಇಂತಹ ಅಹಿತಕರ ಘಟನೆ ನಡೆದಿಲ್ಲ. ಮಂಗಳೂರಿನಲ್ಲಿ ನಿನ್ನೆ ಸಣ್ಣ ಪ್ರಾಯದ ಹುಡುಗರು ಒಟ್ಟು ಸೇರಿ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಅದಾಗಲೇ ಲಾಠಿಚಾರ್ಜ್ ಆರಂಭಿಸಿದ ಪೊಲೀಸರು ಅಶ್ರುವಾಯು ಸಿಡಿಸಿದ್ದಲ್ಲದೆ, ಮೂರು ಗಂಟೆಯ ಅವಧಿಯಲ್ಲಿ ಗೋಲಿಬಾರ್ ನಡೆಸಿದ್ದಾರೆ. ಆಸ್ಪತ್ರೆಗೆ ನುಗ್ಗಿ ಅಶ್ರುವಾಯು ಸಿಡಿಸಿದ್ದಾರೆ. ಈ ರೀತಿ ಪೊಲೀಸರ ಅಮಾನವೀಯ ವರ್ತನೆ ಇತಿಹಾಸದಲ್ಲಿಯೇ ಮೊದಲು. ಈ ಘಟನೆ ಬ್ರಿಟಿಷ್ ಆಡಳಿತವನ್ನು ನೆನಪಿಸಿದೆ ಎಂದು ಅವರು ಹೇಳಿದರು.
ಸಿಎಎ ಹಾಗೂ ಎನ್‌ಆರ್‌ಸಿ ಸೂಕ್ಷ್ಮ ವಿಚಾರ. ಕಾನೂನಾಗಿ ಪರಿವರ್ತಿಸುವ ಸಂದರ್ಭ ಸರಕಾರ ಗಂಭೀರವಾಗಿ ಚಿಂತನೆ ನಡೆಸಬೇಕಾಗಿತ್ತು. ಜನರ ಎದುರು ತಂದು ಚರ್ಚಿಸಿ ಮಾಡುವ ಬದಲು ಏಕಾಏಕಿ ಮಾಡಿ ಜನರನ್ನು ಗೊಂದಲಕ್ಕೆ ಸಿಲುಕಿಸುವಲ್ಲಿ ರಾಜಕೀಯ ಅಡಗಿದೆಯೋ ? ಬಿಜೆಪಿಯ ಹಿಡೆನ್ ಅಜೆಂಡವೋ ಅರ್ಥ ಆಗುತ್ತಿಲ್ಲ ಎಂದು ಹರೀಶ್ ಕುಮಾರ್ ನುಡಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ವಿನಯ್‌ರಾಜ್, ನಾಯಕರಾದ ಸದಾಶಿವ ಉಳ್ಳಾಲ್, ಶುಭೋದಯ ಆಳ್ವ, ನಝೀರ್ ಬಜಾಲ್ ಉಪಸ್ಥಿತರಿದ್ದರು.
ರಾಜ್ಯದಲ್ಲಿ ನಿಷೇಧಾಜ್ಞೆ ವಿಧಿಸಿದ್ದೇ ಅಹಿತಕರ ಘಟನೆ ಕಾರಣ: ರಮಾನಾಥ ರೈ
ರಾಜ್ಯ ಸರಕಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ ವಿಧಿಸಿದ್ದೇ ನಿನ್ನೆ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಗೆ ಕಾರಣ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ನಿಷೇಧಾಜ್ಞೆ ವಿಧಿಸುವ ಮೂಲಕ ಗಲಾಟೆಗೆ ಪ್ರಚೋಚದನೆ ನೀಡಲಾಗಿದೆ. ನಾನು ಗೃಹ ಸಚಿವನಾಗಿದ್ದ ಸಂದರ್ಭ ಇದಕ್ಕಿಂತ ದೊಡ್ಡ ಪ್ರತಿಭಟನೆಯನ್ನು ಬಿಜೆಪಿ ಪಕ್ಷ ಮಾಡಿದೆ. ಅದಕ್ಕಾಗಿ ಇಲ್ಲಿಯೂ ಪೂರ್ವಭಾವಿಯಾಗಿ ನಿಷೇಧಾಜ್ಞೆ ಹಾಕಲಾಗಿಲ್ಲ. ಎಲ್ಲಿಯಾದರೂ ಗಲಾಟೆ ನಡೆಯುವ ಸಂದರ್ಭಗಳಿದ್ದಲ್ಲಿ, ನಿಷೇಧಾಜ್ಞೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಹಾಕಲಾಗುತ್ತದೆ. ಬಳಿಕ ಗಲಾಟೆ ನಡೆದರೆ ಲಾಠಿಚಾರ್ಜ್, ಅಶ್ರುವಾಯು ಸಿಡಿಸಲಾಗುತ್ತದೆ. ಆ ಬಳಿಕ ಅಹಿತಕರ ಘಟನೆ ನಡೆದ ಬಳಿಕವಷ್ಟೆ ಕರ್ಫ್ಯೂ ವಿಧಿಸಲಾಗುತ್ತದೆ. ಆದರೆ ಮಂಗಳೂರಿನಲ್ಲಿ ನಡೆದ ಘಟನೆಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ನೇರ ಹೊಣೆ, ಇದೊಂದು ಗೋಲಿಬಾರ್ ಹತ್ಯೆ ಎಂದು ರಮಾನಾಥ ರೈ ಆರೋಪಿಸಿದರು.
ನಿಷೇಧಾಜ್ಞೆ ಮುರಿದು ಶವಮೆರವಣಿಗೆ ನಡೆಸಿ, ಮುಖಂಡರನ್ನು ಎತ್ತಿ ಕುಣಿದಾಡಿರುಂತಹ ಪ್ರತಿಭಟನೆಗಳು ಜಿಲ್ಲೆಯಲ್ಲಿ ದಾಖಲೆ ಇದೆ. ಆದರೆ ಆ ಸಂದರ್ಭವನ್ನು ಅತ್ಯಂತ ಶಾಂತಿಯುತವಾಗಿ ನಿಭಾಯಿಸಲಾಗಿತ್ತು. ಆದರೆ. ನಿನ್ನೆಯ ಘಟನೆಗೆ ಸ್ವಯಂ ಪ್ರೇರಿತ ಗಲಾಟೆಗೆ ಪ್ರಚೋದನೆ ನೀಡಲಾಗಿದೆ ಎಂದು ಅವರು ಹೇಳಿದರು.