ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿದ ಕೆ.ಎಸ್. ಈಶ್ವರಪ್ಪ
ಉಡುಪಿ, ಡಿ.20: ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಇಂದು ರಾತ್ರಿ ವೇಳೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ, ಪೇಜಾವರ ಸ್ವಾಮೀಜಿಯ ಆರೋಗ್ಯದ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ, ಪೇಜಾವರ ಸ್ವಾಮೀಜಿ ನಮಗೆ ದೇವರಿದ್ದ ಹಾಗೆ. ಅವರ ಜೀವನವೇ ನಮಗೆ ಆದರ್ಶ. 48 ಗಂಟೆ ಏನು ಹೇಳೋಕೆ ಆಗಲ್ಲ ಎಂದು ವೈದ್ಯರು ಹೇಳಿದ್ದಾರೆ. ಉಡುಪಿ ಶ್ರೀಕೃಷ್ಣನೇ ಪೇಜಾವರ ಸ್ವಾಮೀಜಿಯನ್ನು ಉಳಿಸಿಕೊಳ್ಳುತ್ತಾನೆ. ಇಡೀ ಹಿಂದೂ ಸಮಾಜವನ್ನು ಒಂದುಗೂಡಿಸುವ ಕೆಲವೇ ಸ್ವಾಮಿಜಿಗಳಲ್ಲಿ ಪೇಜಾವರ ಸ್ವಾಮೀಜಿ ಕೂಡ ಒಬ್ಬರು ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪೇಜಾವರ ಸ್ವಾಮೀಜಿ ನಡೆದಾಡುವ ದೇವರು ಎಂದು ನಂಬಿದ್ದೇವೆ. ಸ್ವಾಮೀಜಿ ಶೀಘ್ರ ಚೇತರಿಸಿ ಕೊಳ್ಳಬೇಕು. ಇಡೀ ದೇಶ ಸ್ವಾಮೀಜಿಯ ಪರವಾಗಿ ಪ್ರಾರ್ಥಿಸುತ್ತಿದೆ. ಪೇಜಾವರ ಸ್ವಾಮೀಜಿ ಕೇವಲ ಮಠಾಧೀಶರಲ್ಲ. ಅವರು ದೊಡ್ಡ ಸಮಾಜ ಸುಧಾರಕರು. ದಲಿತರ ಕೇರಿಯಲ್ಲಿ ಸಂಚರಿಸಿ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಸಂತ. ರಾಷ್ಟ್ರದ ಅನೇಕರಿಗೆ ಮಾರ್ಗದರ್ಶನ ಮಾಡಿರುವ ಪೇಜಾವರ ಸ್ವಾಮೀಜಿ, ಸಮಾಜ ಸುಧಾರಣೆಯ ಕೊಂಡಿಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಶಾಸಕರಾದ ಸುನೀಲ್ ಕುಮಾರ್, ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.