×
Ad

ಸಾಹಿತಿ ಎಂ.ರಾಮಚಂದ್ರ ನಿಧನ

Update: 2019-12-20 21:13 IST

ಕಾರ್ಕಳ, ಡಿ.20: ಕನ್ನಡದ ಹಿರಿಯ ಸಾಹಿತಿ ಹಾಗೂ ಸಂಘಟಕ ಪ್ರೊ. ಎಂ.ರಾಮಚಂದ್ರ ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ಮುಂಜಾನೆ ತೆಳ್ಳಾರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 70 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮೂಲತ: ಸುಳ್ಳ ತಾಲೂಕಿನವರಾದ ಎಂ.ರಾಮಚಂದ್ರ, ಪ್ರಾಥಮಿಕ ಶಿಕ್ಷಣವನ್ನು ಮಂಡೆಕೋಲು, ಪ್ರೌಢ ಶಿಕ್ಷಣವನ್ನು ಕಾಸರಗೋಡು, ಮಂಗಳೂರಿನ ಸೈಂಟ್ ಅಲಾಸಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಧಾರವಾಡದ ಕರ್ನಾಟಕ ವಿವಿಯಿಂದ ಕನ್ನಡದಲ್ಲಿ ಎಂಎ ಪದವಿ ಪಡೆದು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 1997ರಲ್ಲಿ ನಿವೃತ್ತರಾಗಿದ್ದರು.

ಕನ್ನಡದ ಹೆಚ್ಚಿನೆಲ್ಲಾ ಖ್ಯಾತನಾಮ ಸಾಹಿತಿಗಳು, ಲೇಖಕರ ನಿಕಟ ಪರಿಚಯ ವನ್ನು ಹೊಂದಿದ್ದ ಅವರು, ಕಾರ್ಕಳದಲ್ಲಿ ತಾವೇ ಸ್ಥಾಪಿಸಿದ್ದ ಕಾರ್ಕಳ ಸಾಹಿತ್ಯ ಸಂಘದ ಮೂಲಕ ಅವರ ವಿದ್ವತ್‌ನ ಪರಿಚಯವನ್ನು ಕಾರ್ಕಳದ ಜನತೆಗೆ ಮಾಡಿಸುತಿದ್ದರು. ಲೇಖಕರಾಗಿಯೂ ಪ್ರಸಿದ್ಧರಾಗಿದ್ದ ಅವರು ಸಾಹಿತ್ಯದ ವಿವಿಧ ಪ್ರಕಾರಗಳ ವಿಚಾರ ಸಂಕಿರಣ, ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ ಸಂಘಟಿಸುವಲ್ಲಿ ಹೆಚ್ಚು ಜನಪ್ರಿಯರಾಗಿದ್ದರು.

ಏರ್ಯಬೀಡು ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಎಸ್.ವಿ.ಪರಮೇಶ್ವರ ಭಟ್ ಪ್ರಶಸ್ತಿ, ಮಣಿಪಾಲ ಅಕಾಡೆಮಿ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಜಯಿಸಿರುವ ಎಂ.ರಾಮಚಂದ್ರರನ್ನು ಇತ್ತೀಚೆಗೆ ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಬಾಡದ ಹೂಗಳು, ನೆನಪಿನ ಸುರಗಿ, ಚಿತ್ರಚರಿತ್ರೆ ಇವರ ಪ್ರಮುಖ ಕೃತಿಗಳು. ಸೇಡಿಯಾಪು ಕೃಷ್ಣಭಟ್ಟರ ಪತ್ರಾವಳಿ ಇವರ ಸಂಪಾದಿತ ಕೃತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News