×
Ad

ಮಂಗಳೂರು ಗಲಭೆ: ಹೆದ್ದಾರಿ ಸಂಚಾರದಲ್ಲಿ ನಿರ್ಬಂಧ

Update: 2019-12-20 21:20 IST

ಪಡುಬಿದ್ರಿ: ಮಂಗಳೂರಿನಲ್ಲಿ ಕರ್ಫ್ಯೂ ಹೇರಿದ ಹಿನ್ನಲೆಯಲ್ಲಿ ಮಂಗಳೂರು ಕಡೆಗೆ ವಾಹನಗಳನ್ನು ಪಡುಬಿದ್ರಿ ಮತ್ತು ಹೆಜಮಾಡಿಯಲ್ಲಿ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

ಶುಕ್ರವಾರ ಬೆಳಗ್ಗೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ವಿರಳವಾಗಿದೆ. ಮಂಗಳೂರಿಗೆ ತೆರಳುವ ವಾಹನಗಳನ್ನು ಹೆಜಮಾಡಿ ಟೋಲ್‍ಗೇಟ್ ಬಳಿ ಪೊಲೀಸರು ತಡೆದು ಹಿಂದಕ್ಕೆ ಕಳುಹಿಸುತಿದ್ದಾರೆ. ಪಡುಬಿದ್ರಿ ಪೇಟೆಯ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಸರ್ಕಲ್ ಬಳಿ ಮಂಗಳೂರಿಗ ತೆರಳುವ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸುತಿದ್ದಾರೆ. ಇದರಿಂದ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳೂರು-ಉಡುಪಿ ಕಡೆಗೆ ತೆರಳುವ ಬಸ್ಸುಗಳು ಸ್ಥಗಿತಗೊಂಡಿದ್ದು, ಕಾರ್ಕಳ ಕಡೆಗೆ ತೆರಳುವ ಬೆರಳೆಣಿಕಯ ಬಸ್ಸುಗಳು ಮಾತ್ರ ಸಂಚರಿಸುತಿದೆ. ಸಂಜೆಯ ಬಳಿಕ ಉಡುಪಿಯತ್ತ ಬೆರಳೆಣಿಕೆಯ ಬಸ್ಸುಗಳು ಸಂಚಾರ ಆರಂಭಿಸಿತು.

ವಾಹನಗಳ ಸಾಲು: ಮಂಗಳೂರು ಕಡೆಗೆ ಸಂಚರಿಸುವ ವಾಹನಗಳಿಗೆ ಅವಕಾಶ ನೀಡದೆ ಇರುವುದರಿಂದ ಪಡುಬಿದ್ರಿಯಿಂದ ಸುಮಾರು 2ಕಿಮೀ ಹಾಗೂ ಕಾರ್ಕಳ ರಾಜ್ಯ ಹೆದ್ದಾರಿಯ 3ಕಿಮೀ ದೂರದ ವರೆಗೂ ಲಾರಿಗಳ ಸಾಲುಗಳು ಕಂಡುಬಂತು. ದೂರದ ಊರಿಗೆ ತೆರಳುವ ವಾಹನಗಳನ್ನು ಪೊಲೀಸರು ತಡೆದ ಹಿನ್ನಲೆಯಲ್ಲಿ ಕೆಲವರು ಪಡುಬಿದ್ರಿಯಲ್ಲಿ ಬೀಡು ಬಿಟ್ಟರೆ ಇನ್ನು ಕೆಲವು ವಾಹನ ಸವಾರರು ಫಲಿಮಾರು ಕಿನ್ನಿಗೋಳಿ ಮೂಲಕ ಸುತ್ತುಬಳಸಿ ಮಂಗಳೂರು ಕಡೆಗೆ ಸಂಚರಿಸಿದರು.

ಸಂಜೆ 7ಗಂಟೆಯವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡದೆ ಇರುವುದರಿಂದ ಪಡುಬಿದ್ರಿ ಯಾದ್ಯಂತ ವಾಹನಗಳು ಸಾಲುಗಟ್ಟಿ ನಿಂತಿರುವುದರಿಂದ ಸಂಚಾರಕ್ಕೆ ತೊಡಕಾಗುತ್ತಿದೆ. ಕೆಎಸ್‍ಆರ್‍ಟಿಸಿ ಬಸ್ಸಿಗೆ ಕಲ್ಲು ತೂರಿದ್ದಾರೆ ಎಂಬ ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News