×
Ad

ಉತ್ತರಪ್ರದೇಶದ 14 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತ: 3500ಕ್ಕೂ ಅಧಿಕ ಪ್ರತಿಭಟನಕಾರರ ವಶ

Update: 2019-12-20 22:11 IST

ಲಕ್ನೋ, ಡಿ. 20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಗುರುವಾರ ನಡೆದ ವ್ಯಾಪಕ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ 14 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಹಾಗೂ ಪಠ್ಯ ಸಂದೇಶ ಸೇವೆ ಸ್ಥಗಿತಗೊಳಿಸಲಾಗಿದೆ. 3,505ಕ್ಕೂ ಅಧಿಕ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶದಲ್ಲಿ ಇರಿಸಲಾಗಿದೆ. ಇವರಲ್ಲಿ 200 ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಲಕ್ನೋದಲ್ಲಿ ವಶದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ 12 ಗಂಟೆ ವರೆಗೆ ಎಸ್‌ಎಂಎಸ್ ಹಾಗೂ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಎಲ್ಲಾ ಟೆಲಿಕಾಂ ಸೇವೆ ಹಾಗೂ ಇಂಟರ್‌ನೆಟ್ ಪೂರೈಕೆದಾರರಿಗೆ ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ಥಿ ಹೇಳಿದ್ದಾರೆ.

ಲಕ್ನೊ ಅಲ್ಲದೆ ಇತರ ಜಿಲ್ಲೆಗಳಾದ ಶಹರಣ್‌ಪುರ, ಮೀರತ್, ಶಾಮ್ಲಿ, ಮುಝಪ್ಫರ್‌ನಗರ, ಗಾಝಿಯಾಬಾದ್, ಬರೇಲಿ, ಮಾವು, ಸಂಭಾಲ್, ಅಝಂಗಢ, ಆಗ್ರಾ, ಕಾನ್ಪುರ, ಉನ್ನಾವೊ ಹಾಗೂ ಮೊರದಾಬಾದ್‌ನಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಪ್ರತಿಭಟನೆಯಲ್ಲಿ 16 ಮಂದಿ ಪೊಲೀಸರು ಸೇರಿದಂತೆ 35 ಮಂದಿ ಗಾಯಗೊಂಡಿದ್ದಾರೆ.

 ಸತ್ಖಂಡ ಪೊಲೀಸ್ ಹೊರ ಠಾಣೆಯ ಸಮೀಪ , ಲಕ್ನೊದ ಹುಸೈನಾಬಾದ್ ಪ್ರದೇಶದಲ್ಲಿ ಗುಂಡಿನಿಂದ ಗಾಯಗೊಂಡಿದ್ದ ಮುಹಮ್ಮದ್ ವಾಕಿಲ್ (25) ಗುರುವಾರ ಮೃತುಪಟ್ಟಿದ್ದಾರೆ. ಕಲ್ಲು ತೂರಾಟ, ದಾಂಧಲೆ, ಬೆಂಕಿ ಹಚ್ಚುವಿಕೆ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ ಕಾರಣಕ್ಕೆ ಕೇಂದ್ರ ಲಕ್ನೋದ ಪರಿವರ್ತನ್ ಚೌಕ್, ಮಾದೇಯಗಂಜ್, ಹಳೇ ನಗರದ ಸತ್ಖಂದ ಪ್ರದೇಶ ರಣರಂಗವಾಗಿ ಮಾರ್ಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News