×
Ad

ಪೇಜಾವರಶ್ರೀ ಮತ್ತೆ ಕೃಷ್ಣನ ಪೂಜೆ ಮಾಡುವಂತಾಗಲಿ : ಮಣಿಪಾಲದಲ್ಲಿ ಸಿಎಂ ಯಡಿಯೂರಪ್ಪ

Update: 2019-12-21 17:03 IST

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನ್ಯುಮೋನಿಯಾ ಹಾಗೂ ಉಸಿರಾಟ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಭೇಟಿ ನೀಡಿದರು.

ಶನಿವಾರ ಮಧ್ಯಾಹ್ನ 3:20ಕ್ಕೆ ಆಸ್ಪತ್ರೆಗೆ ಆಗಮಿಸಿದ ಅವರು, ಐಸಿಯುನಲ್ಲಿರುವ  ಶ್ರೀಗಳ ಆರೋಗ್ಯದ ಬಗ್ಗೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯರನ್ನು ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪೇಜಾವರ ಶ್ರೀ ಶೀಘ್ರ ಗುಣಮುಖರಾಗಿ ಶ್ರೀ ಕೃಷ್ಣನ ಪೂಜೆ ಮಾಡಬೇಕು‌. ಅದನ್ನು ನಾವು ನೋಡಬೇಕು ಎಂಬುದು ನಮ್ಮ ಆಸೆ ಎಂದರು. ಎಲ್ಲಾ ತಜ್ಞ ವೈದ್ಯರು ಅವರ ಆರೋಗ್ಯ ಸುಧಾರಣೆಗೆ ಪ್ರಯತ್ನ ಪಡುತ್ತಿ ದ್ದಾರೆ.‌‌ ಶ್ರೀಗಳು ಕಣ್ಣುಬಿಡುತ್ತಿದ್ದು, ಸಹಜವಾಗಿ ಉಸಿರಾಡಲು ಯತ್ನಿಸುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.

ಭಕ್ತರಲ್ಲಿ ಪ್ರಾರ್ಥನೆ ಮಾಡುತ್ತೇನೆ ಯಾರೂ ಆಸ್ಪತ್ರೆಗೆ ಬಂದು ತೊಂದರೆ ಕೊಡೊದು ಬೇಡ. ಅವರ ಆರೋಗ್ಯ ಸುಧಾರಣೆ ಬಳಿಕ ನಾವೆಲ್ಲ ಮಠಕ್ಕೆ ಬಂದು ಭೇಟಿ ಆಗೋಣ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ಸಹ ಶ್ರೀಗಳ ಆರೋಗ್ಯದ ಬಗ್ಗೆ  ದೂರವಾಣಿ ಮೂಲಕ ವಿಚಾರಿಸಿದ್ದಾರೆ.  ಅವರೂ ಪ್ರಾರ್ಥಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಸ್ಥಾಪಿಸುವಾಗ ಶ್ರೀಗಳೊಂದಿಗೆ ನಾನೂ ಇದ್ದೆ. ಈಗ ಅವರ ಅಪೇಕ್ಷೆಯಂತೆ ಭವ್ಯ ರಾಮ ಮಂದಿರ ನಿರ್ಮಾಣದ ಸಂಕಲ್ಪ‌  ಈಡೇರುವ ಸುಸಂದರ್ಭದಲ್ಲಿ ಅವರು ಬದುಕಿರಬೇಕು ಎಂದರು.

ನಾವು ಕಂಡಂತ ಅಪರೂಪದ ‌ಸನ್ಯಾಸಿ. ಧರ್ಮ ಜಾಗೃತಿಗಾಗಿ ದೇಶದ ಉದ್ದಗಲಕ್ಕೂ ಅವಿರತವಾಗಿ ಸಂಚರಿಸಿದ್ದಾರೆ‌. ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೆ. ಪೇಜಾವರ ಶ್ರೀಗಳ ಆರೋಗ್ಯ ಆದಷ್ಟು ಬೇಗ ಸುಧಾರಣೆ ಆಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಸಿಎಂ ಆಗಮನ ಹಿನ್ನೆಲೆಯಲ್ಲಿ ಉಡುಪಿ ನಗರ ಮತ್ತು ಕೆಎಂಸಿ ಆಸ್ಪತ್ರೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಸಿಎಂ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಗೋವಿಂದ ಕಾರಜೋಳ, ಸಂಸದೆ ಶೋಭಾ‌ ಕರಂದ್ಲಾಜೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News