2020ರಲ್ಲಿ ಈ ಕೆಲಸವನ್ನು ನಿಲ್ಲಿಸಲಿದೆ ಫೇಸ್ ಬುಕ್

Update: 2019-12-21 15:52 GMT

ಸ್ಯಾನ್‌ಫ್ರಾನ್ಸಿಸ್ಕೊ, ಡಿ. 21: ಖಾಸಗಿತನಕ್ಕೆ ಭಂಗವುಂಟಾಗಬಹುದಾದ ಹಿನ್ನೆಲೆಯಲ್ಲಿ, 2020ರಲ್ಲಿ ಬಳಕೆದಾರರ ಫೋನ್ ಸಂಖ್ಯೆಗಳನ್ನು ಬಳಸಿ ಅವರ ಸ್ನೇಹಿತರಿಗೆ ಫೇಸ್‌ಬುಕ್ ಸೇರಲು ಆಹ್ವಾನ ನೀಡುವ (ರೆಕಮೆಂಡ್) ಪದ್ಧತಿಯನ್ನು ನಿಲ್ಲಿಸಲು ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ನಿರ್ಧರಿಸಿದೆ.

ಶೀಘ್ರದಲ್ಲೇ, ಬಳಕೆದಾರರು ಲಾಗ್‌ಇನ್ ಆಗುವಾಗ ಅವರ ಮೊಬೈಲ್ ಫೋನ್‌ಗಳಿಗೆ ಫೇಸ್‌ಬುಕ್ ಕೋಡ್ ಒಂದನ್ನು ಕಳುಹಿಸುತ್ತದೆ. ಇದರಿಂದ ಅವರ ಫೇಸ್‌ಬುಕ್ ಖಾತೆಗಳಿಗೆ ಕನ್ನ ಹಾಕುವುದು ಹ್ಯಾಕರ್‌ಗಳಿಗೆ ಕಷ್ಟವಾಗುತ್ತದೆ ಎಂದು ಬಿಬಿಸಿ ವರದಿಯೊಂದು ತಿಳಿಸಿದೆ.

 ಈ ಬದಲಾವಣೆಯು ಅಮೆರಿಕದ ಫೆಡರಲ್ ವ್ಯಾಪಾರ ಕಮಿಶನ್ (ಎಫ್‌ಟಿಸಿ) ಜೊತೆ ಫೇಸ್‌ಬುಕ್ ಮಾಡಿಕೊಂಡ 5 ಬಿಲಿಯ ಡಾಲರ್ (ಸುಮಾರು 35,500 ಕೋಟಿ ರೂಪಾಯಿ) ಪರಿಹಾರ ಕರಾರಿನ ಭಾಗವಾಗಿದೆ ಹಾಗೂ ಅದು ಮುಂದಿನ ವರ್ಷದಿಂದ ಜಾರಿಗೆ ಬರುತ್ತದೆ.

ಜಾಹೀರಾತುಗಳನ್ನು ಪ್ರಕಟಿಸಲು ಬಳಕೆದಾರರ ಫೋನ್ ಸಂಖ್ಯೆಗಳನ್ನು ಬಳಸುವುದನ್ನು ಫೇಸ್‌ಬುಕ್ ಕಳೆದ ವರ್ಷ ಖಚಿತಪಡಿಸಿತ್ತು ಹಾಗೂ ಜಾಹೀರಾತುಗಳ ಪ್ರಸಾರಕ್ಕಾಗಿ ಬಳಕೆದಾರರ ಫೋನ್ ಸಂಖ್ಯೆಗಳನ್ನು ಬಳಸುವುದನ್ನು ಈ ವರ್ಷದ ಜೂನ್‌ನಲ್ಲಿ ನಿಲ್ಲಿಸಿತ್ತು.

ಮಾರ್ಚ್‌ನಲ್ಲಿ, ಫೇಸ್‌ಬುಕ್‌ನ ಎರಡು-ಅಂಶಗಳ ದೃಢೀಕರಣದ ಲಾಗಿನ್ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಪ್ರಕ್ರಿಯೆಯಲ್ಲಿ, ಫೋನ್ ಸಂಖ್ಯೆಗಳನ್ನು ಒದಗಿಸುವಂತೆ ಅದು ಬಳಕೆದಾರರನ್ನು ಕೇಳಿತ್ತು. ಆದರೆ, ಈ ಫೋನ್ ಸಂಖ್ಯೆಗಳನ್ನು ಜಾಹೀರಾತುದಾರರು ಪತ್ತೆಹಚ್ಚಬಹುದಾಗಿದೆ.

ಜಾಹೀರಾತಿನಿಂದಲೇ ಹಣ ಮಾಡುವ ಫೇಸ್‌ಬುಕ್

ಫೇಸ್‌ಬುಕ್ ತನ್ನ ಬಹುತೇಕ ಎಲ್ಲ ಹಣವನ್ನು ಜಾಹೀರಾತುಗಳ ಮಾರಾಟದ ಮೂಲಕ ಮಾಡುತ್ತದೆ. ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಫೇಸ್‌ಬುಕ್‌ನ ಆದಾಯವು 17.6 ಬಿಲಿಯ ಡಾಲರ್ (ಸುಮಾರು 1.25 ಲಕ್ಷ ಕೋಟಿ ರೂಪಾಯಿ) ಆಗಿತ್ತು. ಈ ಪೈಕಿ 17.3 ಬಿಲಿಯ ಡಾಲರ್ (ಸುಮಾರು 1.23 ಲಕ್ಷ ಕೋಟಿ ರೂಪಾಯಿ) ಜಾಹೀರಾತಿನಿಂದಲೇ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News