×
Ad

ದೇಶದ ಅಭಿವೃದ್ಧಿಗೆ ಸಹಕಾರಿ ಸಂಘಗಳ ಮಹತ್ತರ ಕೊಡುಗೆ: ಸತೀಶ್ಚಂದ್ರ

Update: 2019-12-21 21:26 IST

ಉಡುಪಿ, ಡಿ.21: ಇಂದು ಎಲ್ಲ ಕ್ಷೇತ್ರಗಳಿಗೂ ಕಾಲಿರಿಸಿರುವ ಸಹಕಾರಿ ಸಂಘಗಳು ದೇಶದ ಅಭಿವೃದ್ಧಿಯಲ್ಲಿ ಅತ್ಯಂತ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿವೆ ಎಂದು ಮಂಗಳೂರು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದ್ದಾರೆ.

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಪ್ರಯುಕ್ತ ಶನಿವಾರ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾದ ಸಹಕಾರಿಗಳ ಸಮ್ಮಿಲನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಸ್ವಾತಂತ್ರ ಪೂರ್ವದಲ್ಲಿ ಸುಮಾರು 100 ವರ್ಷಗಳ ಹಿಂದೆ ಯಾವುದೇ ವ್ಯವಸ್ಥೆಗಳಿಲ್ಲದ ಕಾಲದಲ್ಲಿ ದೂರದೃಷ್ಠಿಯೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಿರುವ ಹಿರಿಯರ ಕಾರ್ಯ ನಿಜಕ್ಕೂ ಅದ್ಭುತ. ಇಂದು ಈ ಸಂಸ್ಥೆ ಬಹಳ ಎತ್ತರಕ್ಕೆ ಬೆಳೆದು ಉನ್ನತಿ ಸಾಧಿಸಿದೆ. ಕರಾವಳಿಯ ಸಹಕಾರಿ ಸಂಘಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಲು ಆರ್‌ಬಿಐ ಅನುಮತಿ ನೀಡುವುದಾದರೆ ಮೊತ್ತ ಮೊದಲು ಬಡಗಬೆಟ್ಟು ಸೊಸೈಟಿಗೆ ನೀಡಬೇಕಾಗುತ್ತದೆ ಎಂದರು.

ಸಹಕಾರಿ ಕ್ಷೇತ್ರವು ಗ್ರಾಮೀಣ ಪ್ರದೇಶದ ಜನರಿಗೆ ಸೇವೆ ನೀಡುವುದರೊಂದಿಗೆ ತಾನು ಬೆಳೆಯುವುದರ ಜೊತೆ ಇಡೀ ದೇಶವನ್ನು ಅಭಿವೃದ್ಧಿಯತ್ತ ಕೊಂಡೊ ಯ್ದಿದೆ. ಇಂದು ಉಡುಪಿಯು ಸಹಕಾರಿ ಕ್ಷೇತ್ರದ ಕಾಶಿಯಾಗಿದೆ. ಅದರಲ್ಲಿ ಬಡಗಬೆಟ್ಟು ಸೊಸೈಟಿಯು ಭಾರತ ಮಾತೆಯ ಕಿರೀಟದ ವಜ್ರವಾಗಿ ಬೆಳಗು ತ್ತಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಉದ್ಘಾಟಿಸಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ 25ವರ್ಷಗಳಿಗಿಂತ ಅಧಿಕ ಕಾಲ ಸೇವೆ ಸಲ್ಲಿಸಿದ ಪೌರ ಕಾರ್ಮಿಕರು ಮತ್ತು ವಿದ್ಯುತ್‌ಚ್ಛಕ್ತಿ ಮಂಡಳಿಯ ಸಂಘದ ಕಾರ್ಯ ವ್ಯಾಪ್ತಿಯೊಳಗೆ 25ವರ್ಷಗಳಿಗಿಂತ ಅಧಿಕ ಕಾಲ ಸೇವೆ ಸಲ್ಲಿಸಿದ ಲೈನ್‌ಮೆನ್‌ಗಳನ್ನು ಸನ್ಮಾನಿಸಲಾಯಿತು.

ಹೊಲಿಗೆ ಯಂತ್ರ ಖರೀದಿಗೆ ಸಹಾಯಧನ ಮತ್ತು ವಿಕಲಚೇತನ ರಕ್ಷಾ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಕ್ರೀಡಾಪ್ರತಿಭೆ ಪ್ರತೀಕ್ಷಾ ಅವರನ್ನು ಗೌರವಿಸಲಾಯಿತು. ಬ್ಯಾಂಕ್ ಆಫ್ ಬರೋಡಾ ಉಡುಪಿ ಪ್ರಾದೇಶಿಕ ಪ್ರಬಂಧಕ ರವೀಂದ್ರ ರೈ, ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಪಿ.ಶೆಟ್ಟಿ, ಸಂಘದ ಅಧ್ಯಕ್ಷ ಸಂಜೀವ ಕಾಂಚನ್, ಉಪಾಧ್ಯಕ್ಷ ಎಲ್.ಉಮಾನಾಥ್, ಲೆಕ್ಕಪರಿಶೋಧಕಿ ಹರಿಣಿ ಜಿ.ರಾವ್ ಉಪಸ್ಥಿತರಿದ್ದರು.

ಸಂಘದ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಉಡುಪಿ ಶಾಖಾ ವ್ಯವಸ್ಥಾಪಕ ಪ್ರವೀಣ್ ಕುಮಾರ್ ವಂದಿಸಿದರು. ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಧೀರ್ ರಾವ್ ನಿರ್ದೇಶನದ ನೃತ್ಯ ನಿಕೇತನ ಕೊಡವೂರಿನ ಕಲಾವಿದರಿಂದ ನೃತ್ಯ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News