ಹರಿಯಾಣದ ರೋಹ್ಟಕ್‌ನ ಎಂಡಿ ವಿವಿಗೆ ಚಾಂಪಿಯನ್ ಪ್ರಶಸ್ತಿ

Update: 2019-12-21 15:59 GMT

ಉಡುಪಿ, ಡಿ.21: ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ ಆಶ್ರಯ ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಹಭಾಗಿತ್ವ ದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಹರಿಯಾಣ ರೋಹ್ಟಕ್‌ನ ಎಂ.ಡಿ. ವಿವಿಯು ಚಾಂಪಿಯನ್ ಆಗಿ ಮೂಡಿಬಂದಿದೆ.

ಶನಿವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಉತ್ತರ ವಲಯದ ರೋಹ್ಟಕ್ ವಿವಿ ತಂಡವು ಎದುರಾಳಿ ಅದೇ ವಲಯದ ಅಮೃತಸರ ಜಿ.ಎನ್.ಡಿ. ವಿವಿ ತಂಡವನ್ನು 19 ಅಂಕ(47-28)ಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿ ಗೆದ್ದು ಕೊಂಡಿತು. ಅಮೃತಸರ ವಿವಿಯು ರನ್ನರ್ಸ್‌ ಅಪ್ ಪ್ರಶಸ್ತಿಯನ್ನು ಪಡೆದು ಕೊಂಡಿತು. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಮೃತಸರ ವಿವಿಯು ಎದುರಾಳಿ ಕುರು ಕ್ಷೇತ್ರ ವಿವಿಯನ್ನು 38-31 ಅಂಕಗಳೊಂದಿಗೆ ಪರಭಾವಗೊಳಿಸಿ ಫೈನಲ್ ಪ್ರವೇಶಿಸಿದರೆ, ಎರಡನೆ ಸೆಮಿಫೈನಲ್ ಪಂದ್ಯ ದಲ್ಲಿ ರೋಹ್ಟಕ್ ವಿವಿಯು ಅತಿಥೇಯ ತಂಡವಾದ ದಕ್ಷಿಣ ವಲಯದ ಮಂಗಳೂರು ವಿವಿಯನ್ನು 45-29 ಅಂಕಗಳೊಂದಿಗೆ ಸೋಲಿಸಿ ಅಂತಿಮ ಹಂತಕ್ಕೆ ತೇರ್ಗಡೆಗೊಂಡಿತು.

ಸೆಮಿಫೈನಲ್ ಪಂದ್ಯದಲ್ಲಿ ಪರಾಜಯಗೊಂಡ ತಂಡಗಳ ಮಧ್ಯೆ ಮೂರನೆ ಸ್ಥಾನಕ್ಕಾಗಿ ನಡೆದ ಪಂದ್ಯಾಟದಲ್ಲಿ ಕುರುಕ್ಷೇತ್ರ ವಿವಿಯು ಮಂಗಳೂರು ವಿವಿ ಯನ್ನು 39-27 ಅಂಕಗಳೊಂದಿಗೆ ಸುಲಭವಾಗಿ ಸೋಲಿಸಿ ಮೂರನೆ ಸ್ಥಾನ ವನ್ನು ಪಡೆದು ಕೊಂಡಿತು. ಅತಿಥೇಯ ಮಂಗಳೂರು ವಿವಿಯು ನಾಲ್ಕನೆ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಯಿತು.

ಟೂರ್ನಿಯ ವೈಯಕ್ತಿಕ ಪ್ರಶಸ್ತಿಗಳಾದ ಉತ್ತಮ ಕ್ಯಾಚರ್ ಪ್ರಶಸ್ತಿಯನ್ನು ಅಮೃತಸರ ವಿವಿ ತಂಡದ ರಿಂಕು, ಉತ್ತಮ ರೈಡರ್ ಪ್ರಶಸ್ತಿಯನ್ನು ಮಂಗಳೂರು ವಿವಿಯ ಮಿಥಿನ್, ಆಲ್‌ರೌಂಡರ್ ಪ್ರಶಸ್ತಿಯನ್ನು ಕುರುಕ್ಷೇತ್ರ ವಿವಿಯ ಅಂಕಿತ್ ಮತ್ತು ಮ್ಯಾನ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನು ರೋಹ್ಟ್ ವಿವಿಯ ವಿನಯ್ ಪಡೆದುಕೊಂಡರು.

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ವಿಜೇತ ತಂಡಗಳಿಗೆ ಟ್ರೋಫಿ ಯನ್ನು ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್, ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ., ಭಾರತ ಕಬಡ್ಡಿ ತಂಡದ ಉಪನಾಯಕ  ಮಣಿಂದರ್ ಸಿಂಗ್ ಉಪಸ್ಥಿತರಿದ್ದರು.

ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ ವೀಕ್ಷಕ ಡಾ.ಎಂ.ಎಸ್.ದುಲ್ ಟೂರ್ನಮೆಂಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಉಪಪ್ರಾಂಶುಪಾಲ ಡಾ.ಪ್ರಕಾಶ್ ರಾವ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ವಂದಿಸಿದರು. ಅಪೂರ್ವ ಹಾಗೂ ಅನುಪಮಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News