ಫೆಲೆಸ್ತೀನ್‌ನಲ್ಲಿನ ಯುದ್ಧಾಪರಾಧಗಳ ಬಗ್ಗೆ ಪೂರ್ಣ ಪ್ರಮಾಣದ ವಿಚಾರಣೆ
ದ ಹೇಗ್ (ನೆದರ್‌ಲ್ಯಾಂಡ್ಸ್), ಡಿ. 21: ಫೆಲೆಸ್ತೀನ್ ಭೂಭಾಗಗಳಲ್ಲಿ ನಡೆಯುತ್ತಿದೆ ಎನ್ನಲಾದ ಯುದ್ಧಾಪರಾಧಗಳ ಬಗ್ಗೆ ನಾನು ಪೂರ್ಣ ಪ್ರಮಾಣದ ವಿಚಾರಣೆ ಮಾಡಲು ಬಯಸಿದ್ದೇನೆ ಎಂದು ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ದ ಮುಖ್ಯ ಪ್ರಾಸಿಕ್ಯೂಟರ್ ಫತೂ ಬೆನ್ಸೂಡ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಇಸ್ರೇಲ್ ಮತ್ತು ಅಮೆರಿಕಗಳು ತೀವ್ರವಾಗಿ ಪ್ರತಿಕ್ರಿಯಿಸಿವೆ.
ಅದೇ ವೇಳೆ, ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ತೀರ್ಮಾನವನ್ನು ಫೆಲೆಸ್ತೀನ್ ಸ್ವಾಗತಿಸಿದೆ. ಇದು ತುಂಬಾ ಹಿಂದೆಯೇ ಆಗಬೇಕಾಗಿತ್ತು ಎಂದು ಅದು ಹೇಳಿದೆ. 2014ರಲ್ಲಿ ಗಾಝಾದಲ್ಲಿ ಯುದ್ಧ ನಡೆದ ಬಳಿಕ, ಅಲ್ಲಿನ ಪರಿಸ್ಥಿತಿಯ ಬಗ್ಗೆ 5 ವರ್ಷಗಳ ಕಾಲ ಪ್ರಾಥಮಿಕ ತನಿಖೆ ಆಗಿತ್ತು.
ಈ ನಿರ್ಧಾರವು ಐಸಿಸಿಯನ್ನು ಇಸ್ರೇಲ್ ವಿರುದ್ಧದ ‘ರಾಜಕೀಯ ದಾಳ’ವನ್ನಾಗಿಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
2002ರಲ್ಲಿ ರಚನೆಯಾದಂದಿನಿಂದ ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಒಡಂಬಡಿಕೆಗೆ ಸಹಿ ಹಾಕಲು ಇಸ್ರೇಲ್ ನಿರಾಕರಿಸಿದೆ.
‘‘ಫೆಲೆಸ್ತೀನ್‌ನಲ್ಲಿ ನೆಲೆಸಿರುವ ಪರಿಸ್ಥಿತಿಯ ಕುರಿತ ತನಿಖೆಯನ್ನು ಮುಂದುವರಿಸಲು ಗಟ್ಟಿ ಆಧಾರಗಳಿವೆ ಎನ್ನುವುದು ನನಗೆ ಮನವರಿಕೆಯಾಗಿದೆ’’ ಎಂದು ಐಸಿಸಿ ಮುಖ್ಯ ಪ್ರಾಸಿಕ್ಯೂಟರ್ ಬೆನ್ಸೂಡ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಪೂರ್ವ ಜೆರುಸಲೇಮ್ ಮತ್ತು ಗಾಝಾ ಪಟ್ಟಿ ಸೇರಿದಂತೆ ಪಶ್ಚಿಮ ದಂಡೆಯಲ್ಲಿ ಯುದ್ಧಾಪರಾಧಗಳು ನಡೆದಿವೆ ಅಥವಾ ನಡೆಯುತ್ತಿದೆ ಎನ್ನುವ ಬಗ್ಗೆ ನನತೆ ಮನವರಿಕೆಯಾಗಿದೆ’’ ಎಂದು ಅವರು ಹೇಳಿದರು. ಆದರೆ, ಯುದ್ಧಾಪರಾಧಗಳನ್ನು ಯಾರು ಮಾಡಿದ್ದಾರೆ ಎನ್ನುವುದನ್ನು ಅವರು ತಿಳಿಸಲಿಲ್ಲ.
ಈ ವಿಷಯದಲ್ಲಿ ವಿವಾದಕ್ಕೆ ಆಸ್ಪದ ಮಾಡಿಕೊಡಬಹುದಾದ ಕಾನೂನು ಮತ್ತು ವಾಸ್ತವತೆಯ ಸಂಗತಿಗಳು ಒಳಗೊಂಡಿರುವುದರಿಂದ, ಐಸಿಸಿ ಅಧಿಕಾರ ವ್ಯಾಪ್ತಿ ಹೊಂದಿರುವ ಭೂಭಾಗಗಳ ಬಗ್ಗೆ ತೀರ್ಪು ನೀಡುವಂತೆ ಮೊದಲು ತಾನು ನ್ಯಾಯಾಲಯವನ್ನು ಕೋರುತ್ತೇನೆ ಎಂದರು.
‘‘ಅದರಲ್ಲೂ ಮುಖ್ಯವಾಗಿ, ನ್ಯಾಯಾಲಯದ ವ್ಯಾಪ್ತಿ ಹೊಂದಿರುವ ಹಾಗೂ ನಾನು ತನಿಖೆ ನಡೆಸಬಹುದಾದ ಭೂಭಾಗವು ಪೂರ್ವ ಜೆರುಸಲೇಮ್ ಮತ್ತು ಗಾಝಾ ಸೇರಿದಂತೆ ಪಶ್ಚಿಮ ದಂಡೆಯನ್ನು ಒಳಗೊಂಡಿದೆಯೇ ಎನ್ನುವುದನ್ನು ನಾನು ಮೊದಲು ಖಚಿತಪಡಿಸಬೇಕಾಗಿದೆ’’ ಎಂದರು.