ಪೇಜಾವರಶ್ರೀಗಳ ಆರೋಗ್ಯ ಸ್ಥಿರ, ಆದರೆ ಗಂಭೀರ: ವೈದ್ಯರ ಹೇಳಿಕೆ

Update: 2019-12-21 16:43 GMT

ಉಡುಪಿ, ಡಿ.21: ನ್ಯುಮೋನಿಯ ಹಾಗೂ ಉಸಿರಾಟದ ತೊಂದರೆಗಾಗಿ ಶುಕ್ರವಾರ ಮುಂಜಾನೆ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗಕ್ಕೆ ದಾಖಲಾಗಿರುವ ಪೇಜಾವರ ಮಠದ 89 ವರ್ಷದ ಹಿರಿಯ ಯತಿಗಳಾದ ಶ್ರೀವಿಶ್ವೇಶತೀರ್ಥರ ಅವರ ಆರೋಗ್ಯ ಸ್ಥಿರವಾಗಿದ್ದರೂ, ಇನ್ನೂ ಗಂಭೀರವಾಗಿಯೇ ಇದೆ ಎಂದು ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಶನಿವಾರ ಸಂಜೆ 5 ಗಂಟೆಗೆ ಬಿಡುಗಡೆಗೊಳಿಸಿದ ಸ್ವಾಮೀಜಿಗಳ ವೈದ್ಯಕೀಯ ಬುಲೆಟಿನ್‌ನಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ತೀವ್ರವಾದ ಉಸಿರಾಟದ ತೊಂದರೆಗಾಗಿ ಡಿ.20ರ ಮುಂಜಾನೆ ಆಸ್ಪತ್ರೆಗೆ ದಾಖಲಾದ ಪೇಜಾವರಶ್ರೀಗಳಿಗೆ ಈಗಲೂ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಈಗಲೂ ಕೃತಕ ಉಸಿರಾಟದ ಬೆಂಬಲದಲ್ಲೇ ಇದ್ದಾರೆ ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಹಿರಿಯ ಯತಿಗಳು ಚಿಕಿತ್ಸೆಗೆ ಸ್ಪಂಧಿಸುತಿದ್ದು, ನಿನ್ನೆಗಿಂತ ಅವರು ದೈಹಿಕ ಸ್ಥಿತಿಯಲ್ಲಿ ಅಲ್ಪಪ್ರಮಾಣದ ಪ್ರಗತಿಯನ್ನು ತೋರಿ ದ್ದಾರೆ. ಅವರ ದೈಹಿಕ ಸ್ಥಿತಿ ಸ್ಥಿರವಾಗಿದ್ದರೂ, ಇನ್ನೂ ಗಂಭೀರವಾಗಿಯೇ ಇದೆ ಎಂದು ಹೇಳಿಕೆ ತಿಳಿಸಿದೆ.

ಮುಖ್ಯಮಂತ್ರಿಗಳಿಂದ ಭೇಟಿ: ಸತತ ಎರಡನೇ ದಿನವಾದ ಇಂದೂ ಸಹ ಪೇಜಾವರಶ್ರೀಗಳ ಆರೋಗ್ಯವನ್ನು ವಿಚಾರಿಸಲು ಗಣ್ಯರ ದಂಡೇ ಆಸ್ಪತ್ರೆಗೆ ಭೇಟಿ ನೀಡುತ್ತಿದೆ. ಇಂದು ಹೀಗೆ ಭೇಟಿ ನೀಡಿದವರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಸಂಪುಟದ ಅನೇಕ ಮಂದಿ ಸಹೋದ್ಯೋಗಿಗಳು ಸೇರಿದ್ದಾರೆ.

ಶನಿವಾರ ಅಪರಾಹ್ನ 3:20ಕ್ಕೆ ಮಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಮಣಿಪಾಲಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಹೆಲಿಪ್ಯಾಡ್‌ನಿಂದ ನೇರವಾಗಿ ಆಸ್ಪತ್ರೆಗೆ ಆಗಮಿಸಿ ಐಸಿಯುನಲ್ಲಿರುವ ಶ್ರೀಗಳ ಆರೋಗ್ಯದ ಬಗ್ಗೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯರನ್ನು ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೇಜಾವರಶ್ರೀಗಳು ಶೀಘ್ರ ಗುಣಮುಖರಾಗಿ ಶ್ರೀಕೃಷ್ಣನ ಪೂಜೆ ಮಾಡಬೇಕು ಹಾಗೂ ಅದನ್ನು ನಾವು ನೋಡಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ ಎಂದರು. ಎಲ್ಲಾ ತಜ್ಞ ವೈದ್ಯರು ಅವರ ಆರೋಗ್ಯದ ಸುಧಾರಣೆಗೆ ಪ್ರಯತ್ನ ಪಡುತ್ತಿದ್ದಾರೆ. ಶ್ರೀಗಳು ಕಣ್ಣುಬಿಡುವ ಪ್ರಯತ್ನ ನಡೆಸಿದ್ದು, ಸಹಜವಾಗಿ ಉಸಿರಾಡಲು ಯತ್ನಿಸುತಿದ್ದಾರೆ ಎಂದರು.

ಯಾರೂ ಸಹ ಆಸ್ಪತ್ರೆಗೆ ಬಂದು ತೊಂದರೆ ಕೊಡಬೇಡಿ ಎಂದು ಸಾರ್ವಜನಿಕರಲ್ಲಿ, ಅವರ ಭಕ್ತರಲ್ಲಿ ವಿನಂತಿಸುತ್ತೇನೆ ಎಂದ ಯಡಿಯೂರಪ್ಪ, ಅವರ ಆರೋಗ್ಯ ಸುಧಾರಿಸಿದ ಬಳಿಕ ನಾವೆಲ್ಲ ಮಠಕ್ಕೆ ತೆರಳಿ ಅವರನ್ನು ಭೇಟಿ ಆಗೋಣ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ಸಹ ಶ್ರೀಗಳ ಆರೋಗ್ಯದ ಬಗ್ಗೆ ದೂರವಾಣಿ ಕರೆ ಮಾಡುವ ಮೂಲಕ ವಿಚಾರಿಸಿದ್ದಾರೆ ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಸ್ಥಾಪಿಸುವಾಗ ಶ್ರೀಗಳೊಂದಿಗೆ ನನಗೂ ಅಲ್ಲಿರುವ ಭಾಗ್ಯ ದೊರಕಿತ್ತು. ಈಗ ಅವರ ಅಪೇಕ್ಷೆಯಂತೆ ಅಯೋಧ್ಯೆ ಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಸಂಕಲ್ಪ ಈಡೇರುವ ಸುಸಂದರ್ಭ ದಲ್ಲಿ ಅವರು ನಮ್ಮೆಂದಿಗಿರಬೇಕು ಎಂದವರು ಹಾರೈಸಿದರು.

ನಾನು ಕಂಡಂತೆ ಅವರೊಬ್ಬ ಅಪರೂಪದ ಸನ್ಯಾಸಿ. ಧರ್ಮ ಜಾಗೃತಿಗಾಗಿ ದೇಶದ ಉದ್ದಗಲಕ್ಕೂ ಅವಿರತವಾಗಿ ಸಂಚರಿಸಿ ದ್ದಾರೆ. ಅದೆಷ್ಟೋ ಬಾರಿ ವಿಶ್ರಾಂತಿ ತೆಗೆದುಕೊಳ್ಳುವಂತೆ ನಾನೇ ಅವರಿಗೆ ಸಲಹೆ ನೀಡಿದ್ದೆ. ಪೇಜಾವರ ಶ್ರೀಗಳ ಆರೋಗ್ಯ ಆದಷ್ಟು ಬೇಗ ಸುಧಾರಣೆ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಯಡಿಯೂರಪ್ಪ ತಿಳಿಸಿದರು.

ಸಿಎಂ ಆಗಮನ ಹಿನ್ನೆಲೆಯಲ್ಲಿ ಉಡುಪಿ ನಗರ ಮತ್ತು ಕೆಎಂಸಿ ಆಸ್ಪತ್ರೆ ಸುತ್ತಮುತ್ತ ಬಿಗುವಾದ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಸಿಎಂ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲೆಯ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಸುನಿಲ್‌ಕುಮಾರ್ ಹಾಗೂ ಬಿಜೆಪಿಯ ಜಿಲ್ಲಾ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಬಸವರಾಜ ಬೊಮ್ಮಾಯಿ: ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸ್ವಾಮೀಜಿಗಳ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗಿದೆ. ಸೋಂಕು ಸಹ ಕಡಿಮೆಯಾಗಿದ್ದು, ಆರೋಗ್ಯದಲ್ಲಿ ಚೇತರಿಕೆಯಾ ಗುವ ಎಲ್ಲಾ ಲಕ್ಷಣಗಳಿವೆ ಎಂದರು.

ಭೇಟಿ ನೀಡಿದ ಗಣ್ಯರು: ಪೇಜಾವರಶ್ರೀಗಳನ್ನು ಇಂದು ಭೇಟಿ ಮಾಡಿದ ಗಣ್ಯರಲ್ಲಿ ಕಾಂಗ್ರೆಸ್ ನಾಯಕರಾದ ಯು.ಟಿ.ಖಾದರ್, ಸಿ.ಎಂ.ಇಬ್ರಾಹಿಂ, ಆಸ್ಕರ್ ಪೆರ್ನಾಂಡೀಸ್, ಐವನ್ ಡಿಸೋಜ, ಜಿ.ಎ.ಬಾವಾ,ಹರೀಶ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ನಿನ್ನೆಯಿಂದ ಆಸ್ಪತ್ರೆಯಲ್ಲೇ ಇರುವ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರೊಂದಿಗೆ ಶ್ರೀಗಳ ಆರೋಗ್ಯದ ಕುರಿತು ಚರ್ಚಿಸಿದರು.

ಉಳಿದಂತೆ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು, ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ, ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥರು, ಗುರುಪುರ ವಜ್ರದೇಹಿ ಮಠಾಧೀಶರು, ಬಾರಕೂರಿನ ಶ್ರೀವಿಶ್ವಸಂತೋಷ ಗುರೂಜಿ, ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಲ ಆರೋಗ್ಯ ವಿಚಾರಿಸಿದರು.

ಆಡ್ವಾಣಿಯಿಂದ ಆರೋಗ್ಯ ವಿಚಾರಣೆ

ಹಿರಿಯ ಬಿಜೆಪಿ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರ ಪರವಾಗಿ ಮಗಳು ಪ್ರತಿಭಾ ಅಡ್ವಾಣಿ ಅವರು ಇಂದು ಜಿಲ್ಲೆಯ ಬಿಜೆಪಿ ನಾಯಕರೊಂದಿಗೆ ದೂರವಾಣಿ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದರೆಂದು ತಿಳಿದುಬಂದಿದೆ. ಪೇಜಾವರಶ್ರೀಗಳ ಅನಾರೋಗ್ಯದ ವಿಷಯ ತಿಳಿದು ತಂದೆಯವರು ತೀವ್ರ ಬೇಸರಗೊಂಡಿದ್ದು, ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡು, ಅತಿ ಶೀಘ್ರ ಗುರುಗಳು ಗುಣಮುಖರಾಗುವಂತೆ ಹಾರೈಸಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News