×
Ad

ಮಂಗಳೂರಿನಲ್ಲಿ ಗೋಲಿಬಾರ್ : ಪೊಲೀಸ್ ಆಯುಕ್ತ ಪಿ.ಎಸ್ ಹರ್ಷಾ ವಜಾಕ್ಕೆ ಸಿಎಫ್‌ಐ ಒತ್ತಾಯ

Update: 2019-12-21 22:54 IST

ಮಂಗಳೂರು, ಡಿ.21: ಮಂಗಳೂರಿನಲ್ಲಿ ಗುರುವಾರ ನಡೆದ ಗುಂಡಿನ ದಾಳಿಗೆ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನೇರ ಕಾರಣವಾಗಿದೆ. ಹಾಗಾಗಿ ಅವರನ್ನು ಸೇವೆಯಿಂದಲೇ ವಜಾ ಮಾಡಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಜನರ ಹಕ್ಕಾಗಿದೆ. ಹೋರಾಟಗಳನ್ನು ಹತ್ತಿಕ್ಕುವ ಉದ್ದೇಶದಿಂದ ಮಂಗಳೂರಿನಲ್ಲಿ ಏಕಾಏಕಿ ಸೆ.144 ಜಾರಿ ಮಾಡಿ ಪೊಲೀಸರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಸೆಕ್ಷನ್ ಜಾರಿಯಾಗಿದ್ದ ಕಾರಣ ಜನರು ಗೊಂದಲಕ್ಕೀಡಾಗಿ ಪ್ರತಿಭಟನೆ ಕೈ ಬಿಟ್ಟ ಸಂದೇಶ ಸರಿಯಾಗಿ ತಲುಪಿರಲಿಲ್ಲ. ಹಾಗಾಗಿ ಡಿ.19ರಂದು ಮಂಗಳೂರಿಗೆ ಪ್ರತಿಭಟನಾಕಾರರು ಅಲ್ಪಸಂಖ್ಯೆಯಲ್ಲಿ ಬಂದು ಸೇರಿದ್ದರು. ಆ ಜನರನ್ನು ವಾಪಸ್ ಕಳುಹಿಸುವ ಸಾಧ್ಯತೆ ಇದ್ದರೂ ಪೊಲೀಸರು ಆ ಕೆಲಸ ಮಾಡದೆ ಅಮಾನವೀಯವಾಗಿ ಲಾಠಿ ಜಾರ್ಜ್ ಮಾಡಿ ಅಶ್ರುವಾಯು ಪ್ರಯೋಗಿಸಿ ಗುಂಡಿನ ದಾಳಿ ನಡೆಸಿದ್ದು ಖಂಡನೀಯ.

ಲಾಠಿ ಜಾರ್ಜ್ ಸಂದರ್ಭ ಬಸ್ ನಿಲ್ದಾಣದ ಬಳಿ ಹಲವು ವಿದ್ಯಾರ್ಥಿಗಳು ಬಸ್ಸಿಗೆ ಕಾಯುತ್ತಿದ್ದರೂ ಅವರ ಮೇಲೂ ಪೊಲೀಸರು ದೌರ್ಜನ್ಯವೆಸಗಿದ್ದಾರೆ. ಅಂದು ನಡೆದ ಎಲ್ಲಾ ಹಿಂಸಾಚಾರಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ ನೇರ ಹೊಣೆಯಾಗಿದ್ದಾರೆ. ಶಾಂತಿಯುತವಾಗಿದ್ದ ಮಂಗಳೂರಿಗೆ ಸೆಕ್ಷನ್ ಹಾಕುವ ಅಗತ್ಯವಿರಲಿಲ್ಲ. ಆದರೆ ಪೊಲೀಸರ ವರ್ತನೆಗಳು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಮಸೀದಿ ಹಾಗೂ ಆಸ್ಪತ್ರೆಯ ಐಸಿಯು ಒಳಗಡೆ ದಾಳಿ ಮಾಡಿರುವುದಲ್ಲದೆ, ಅಶ್ರುವಾಯು ಪ್ರಯೋಗಿಸಿರುವುದರಿಂದ ಪೊಲೀಸರ ಪೈಶಾಚಿಕತೆ ಬಯಲಾಗಿದೆ.

ಹಾಗಾಗಿ ಅಂದಿನ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು. ಪೊಲೀಸ್ ಆಯುಕ್ತರನ್ನು ವಜಾಗೊಳಿಸಬೇಕು ಹಾಗೂ ಹಿಂಸಾಚಾರದಲ್ಲಿ ಭಾಗಿಯಾದ ಇತರ ಪೊಲೀಸ್ ಅಧಿಕಾರಿಗಳ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತರ ಕುಟಂಬಕ್ಕೆ ಹಾಗೂ ಗಾಯಾಳುಗಳಿಗೆ ಸೂಕ್ತ ಪರಿಹಾರವನ್ನು ಶೀಘ್ರ ನೀಡಬೇಕು ಎಂದು ಸಿಎಫ್‌ಐ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News