24 ಗಂಟೆಗಳಲ್ಲಿ ಗೃಹಸಚಿವರ ವಜಾ, ತಪ್ಪಿತಸ್ಥ ಅಧಿಕಾರಿಗಳ ಬಂಧನಕ್ಕೆ ಕುಮಾರಸ್ವಾಮಿ ಆಗ್ರಹ

Update: 2019-12-22 08:13 GMT

ಮಂಗಳೂರು, ಡಿ.22: ನಗರದಲ್ಲಿ ಗುರುವಾರ ನಡೆದ ಹಿಂಸಾಚಾರ, ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಗೃಹಸಚಿವರನ್ನು ವಜಾಗೊಳಿಸಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು 24 ಗಂಟೆಯೊಳಗೆ ಅಮಾನತುಗೊಳಿಸಿ ಜೈಲಿಗಟ್ಟಬೇಕು ಎಂದು ಮಾಜಿ ಎಂ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಸುಳ್ಳು ಹೇಳುತ್ತಿದ್ದಾರೆ. ಪೊಲೀಸ್ ಇಲಾಖೆಗೂ ಸರಿಯಾದ ಮಾಹಿತಿ ನೀಡಿಲ್ಲ ಎಂದರು.

ಗೋಲಿಬಾರ್‌ಗೆ ಬಲಿಯಾದವರ ಮೇಲೆಯೇ ಎಫ್‌ಐಆರ್ ದಾಖಲಿಸಿದ್ದು ಎಷ್ಟು ಸರಿ? ಇನ್ ಸ್ಪೆಕ್ಟರ್ ಶಾಂತರಾಮ ಕುಂದರ್ ವಿರುದ್ಧವೂ ಕ್ರಮ ಜರುಗಿಸಿ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪಅವರಿಗೆ ತಪ್ಪಿನ ಬಗ್ಗೆ ಪಶ್ಚಾತ್ತಾಪವೇ ಇಲ್ಲ, ಕನಿಷ್ಢ ಸೌಜನ್ಯವೂ ಇಲ್ಲ. ಶಾಸಕರಲ್ಲೂ ಹೃದಯ ವೈಶಾಲ್ಯತೆ ಇಲ್ಲ. ಗೋಲಿಬಾರ್‌ನಿಂದ ಎರಡೂ ಕುಟುಂಬಗಳು ಅನಾಥವಾಗಿವೆ. ಅವರ ಗತಿ ಏನು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸೂಕ್ಷ್ಮ ಪ್ರದೇಶವಾಗಿರುವ ಮಂಗಳೂರಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅನತಿ ಮೇಲೆ ಆಡಳಿತ ನಡೆಸಲಾಗುತ್ತಿದೆಯೇ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಬಿಎಂ ಫಾರೂಕ್, ಪಕ್ಷದ ಮುಖಂಡರಾದ ಎಂ.ಬಿ.ಸದಾಶಿವ, ವಿಟ್ಲ ಮುಹಮ್ಮದ್ ಕುಂಞಿ, ಯೋಗೀಶ್‌ ಶೆಟ್ಟಿ, ಗೋಲಿಬಾರ್‌ಗೆ ಬಲಿಯಾದ ಅಬ್ದುಲ್ ಜಲೀಲ್, ನೌಶೀನ್ ಕುಟುಂಬಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News