ಮಂಗಳೂರು ಗೋಲಿಬಾರ್ ಪ್ರಕರಣ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಲಿ: ರಮಾನಾಥ ರೈ ಆಗ್ರಹ

Update: 2019-12-22 07:47 GMT

ಮಂಗಳೂರು, ಡಿ.22: ಮಂಗಳೂರಿನಲ್ಲಿ ಗಲಭೆ ಮತ್ತು ಪೊಲೀಸ್ ಗೋಲಿಬಾರಿಗೆ ಇಬ್ಬರು ಬಲಿಯಾಗಲು ರಾಜ್ಯದ ಮುಖ್ಯಮಂತ್ರಿ ತೆಗೆದುಕೊಂಡು ನಿಲುವು ಕಾರಣವಾಗಿದೆ. ಆ ಕಾರಣದಿಂದ ಇಬ್ಬರ ಸಾವಿಗೂ ಸಿಎಂ ನೇರ ಹೊಣೆಗಾರರು. ಈ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿಯ ಮಿತ್ರ ಪಕ್ಷಗಳು ಈ ಕಾಯ್ದೆಯನ್ನು ವಿರೋಧಿಸುತ್ತಿವೆ. ಅದೇರೀತಿ ರಾಜ್ಯದಲ್ಲೂ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಸೆ.144ನ್ನು ಜಾರಿಗೊಳಿಸಿರುವ ಸರಕಾರದ ನಿರ್ಧಾರ ಸರಿಯಲ್ಲ. ಆದ್ದರಿಂದ ಆ ಬಳಿಕ ನಡೆದಿರುವ ಎಲ್ಲ ಅಹಿತಕರ ಘಟನೆಗಳಿಗೆ ಮುಖ್ಯಮಂತ್ರಿ ಮತ್ತು ಗೃಹಸಚಿವರೇ ಕಾರಣ ಎಂದು ಆರೋಪಿಸಿದ್ದಾರೆ.

 *ಸರಕಾರದ ಕೃಷಾಕಟಾಕ್ಷದಲ್ಲಿ ನಡೆದ ಹತ್ಯೆ:

ಪೊಲೀಸರಿಂದ ನಡೆದ ಲಾಠಿಚಾರ್ಜ್ ಮತ್ತು ಗೋಲಿಬಾರ್‌ಗೆ ಇಬ್ಬರು ಬಲಿಯಾಗಿರುವುದ ಸರಕಾರದ ಕೃಪೆಯಿಂದ ನಡೆದಿರುವ ಹತ್ಯೆಯಾಗಿದೆ. ಯಾವುದೇ ಗಲಭೆಯನ್ನು ನಿಯಂತ್ರಿಸಲು ಸಾಮಾನ್ಯವಾಗಿ ಗಾಳಿಯಲ್ಲಿ ಗುಂಡು, ಲಾಠಿಚಾರ್ಜ್ ನಡೆಸಿದ ಉದಾಹರಣೆಗಳಿವೆ. ಆದರೆ ಮಂಗಳೂರಿನಲ್ಲಿ ಆ ರೀತಿ ಪರಿಸ್ಥಿತಿ ವಿಕೋಪಕ್ಕೆ ಹೋಗದೆ ಇದ್ದಾಗಲೂ ಗೋಲಿಬಾರ್ ಮಾಡಿರುವ ಪೊಲೀಸರ ಕ್ರಮವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ರೈ ನುಡಿದರು.

*ವಿಪಕ್ಷ ನಾಯಕರಿಗೆ ತಡೆ ಸರಕಾರದ ಪ್ರಜಾಪ್ರಭುತ್ವ ವಿರೋಧಿ ನಿಲುವು:
ಗಲಭೆ ಸಂತ್ರಸ್ತರನ್ನು ಮುಖ್ಯಮಂತ್ರಿ, ಗೃಹ ಸಚಿವರು ಭೇಟಿ ಮಾಡಿದ್ದಾರೆ. ಆದರೆ ಅದೇರೀತಿ ರಾಜ್ಯ ವಿಪಕ್ಷ ನಾಯಕರು ತಮ್ಮ ಹೊಣೆಗಾರಿಕೆಯಂತೆ ಸಂತ್ರಸ್ತರನ್ನು ಭೇಟಿ ಮಾಡಲು ಹೊರಟಾಗ ಅವರಿಗೆ ಅವಕಾಶ ಮಾಡಿಕೊಡುವುದು ಸರಕಾರದ ಕರ್ತವ್ಯ. ಬದಲಾಗಿ ವಿಪಕ್ಷದವರನ್ನು ತಡೆದು ಹೋಗದಂತೆ ಆದೇಶ ನೀಡುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಸರಕಾರದ ಈ ರೀತಿಯ ನಿಲುವನ್ನು ವಿರೋಧಿಸುವುದಾಗಿ ರಮಾನಾಥ ರೈ ಹೇಳಿದರು

ಕಾಂಗ್ರೆಸ್ ಪಕ್ಷದ ಯಾವ ಮುಖಂಡರು ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ. ಪ್ರಚೋದನಕಾರಿ ಹೇಳಿಕೆ ನೀಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾಗಿರುವವರಲ್ಲಿ ಕೋಮವಾದಿ ಪಕ್ಷದ ನಾಯಕರಿದ್ದಾರೆಯೇ ಹೊರತು ಕಾಂಗ್ರೆಸ್‌ನ ಯಾವ ಮುಖಂಡರೂ ಇಲ್ಲ ಎಂದರು.

ಸುದ್ದಿಗೊಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಐವನ್ ಡಿಸೋಜ, ನಿವೃತ್ತ ಪೊಲೀಸ್ ಅಧಿಕಾರಿ ಜೆ.ಎ.ಬಾವ, ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಅಬ್ದುರ್ರವೂಫ್, ಕಾಂಗ್ರೆಸ್ ಮುಖಂಡರಾದ ಟಿ.ಕೆ.ಸುಧೀರ್, ಅಪ್ಪಿ, ನೀರಜ್ ಪಾಲ್, ಡಿ.ಕೆ.ಅಶೋಕ್, ಎ.ಸಿ.ವಿನಯರಾಜ್, ಸುಭೋದ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News