ಸಿರಿಯ ಸಂತ್ರಸ್ತರಿಗೆ ನೆರವು: ವಿಶ್ವಸಂಸ್ಥೆ ನಿರ್ಣಯದ ವಿರುದ್ಧ ರಶ್ಯ,ಚೀನಾ ವಿಟೋ

Update: 2019-12-22 18:20 GMT

ವಾಶಿಂಗ್ಟನ್,ಡಿ.2: ಸಿರಿಯದಲ್ಲಿ ಅಂತರ್ಯುದ್ಧದಿಂದ ತತ್ತರಿಸುತ್ತಿರುವ ನಲ್ವತ್ತು ಲಕ್ಷಕ್ಕೂ ಅಧಿಕ ಮಂದಿ ಗಡಿಯಾಚೆಯಿಂದ ಮಾನವೀಯ ನೆರವನ್ನು ಒಂದು ವರ್ಷದವರೆಗೆ ವಿಸ್ತರಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ರಶ್ಯ ಹಾಗೂ ಚೀನಾವು ವಿಟೋ ಪ್ರಯೋಗಿಸಿ ತಡೆ ಒಡ್ಡಿರುವುದು ‘ನಾಚಿಕೆಗೇಡು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಪಾಂಪಿಯೊ ಅವರು ವಾಶಿಂಗ್ಟನ್‌ನಲ್ಲಿ ಹೇಳಿಕೆಯೊಂದನ್ನು ನೀಡಿ,‘‘ ಸಿರಿಯದ ಸಂತ್ರಸ್ತರಿಗೆ ಮಾನವೀಯ ನೆರವನ್ನು ಒದಗಿಸುವುದಕ್ಕೆ ಅವಕಾಶ ನೀಡುವ ನಿರ್ಣಯವನ್ನು ವಿರೋಧಿಸುವ ಮೂಲಕ ರಶ್ಯ ಹಾಗೂ ಚೀನಾವು ರಾಜಕೀಯ ದಲ್ಲಿ ತೊಡಗಿದೆ. ನಿಮ್ಮ ಕೈಗಳು ರಕ್ತಸಿಕ್ತವಾಗಿದೆ’’ ಎಂದು ಅವರು ರಶ್ಯ, ಚೀನಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆೆ.

 ಪ್ರಸಕ್ತ ಸಿರಿಯ ಸರಕಾರದ ಔಪಚಾರಿಕ ಅನುಮತಿಯಿಲ್ಲದೆ, ಟರ್ಕಿ ಹಾಗೂ ಇರಾಕ್‌ನಲ್ಲಿರುವ ವಿಶ್ವಸಂಸ್ಥೆಯ ತಪಾಸಣಾ ಠಾಣೆಗಳಲ್ಲಿ ಮೂಲಕ ಸಿರಿಯಾಗೆ ಮಾನವೀಯ ನೆರವು ಹರಿದುಬರುತ್ತಿದೆ. ಆದರೆ ಈ ಅವಕಾಶವು ಜನವರಿ 10ರಂದು ಕೊನೆಗೊಳ್ಳುತ್ತದೆ.

ಮಾನವೀಯ ನೆರವನ್ನು ಸಿರಿಯಾದ ನಾಗರಿಕರಿಗೆ ವಿಶ್ವಸಂಸ್ಥೆಯ ಮೂಲಕ ಒದಗಿಸುವ ನಿರ್ಣಯವನ್ನು ಜರ್ಮನಿ, ಬೆಲ್ಜಿಯಂ ಹಾಗೂ ಕುವೈತ್ ದೇಶಗಳು ಮಂಡಿಸಿದ್ದವು. ಭದ್ರತಾ ಮಂಡಳಿಯ 13 ಸದಸ್ಯ ರಾಷ್ಟ್ರಗಳು ನಿರ್ಣಯವನ್ನು ಬೆಂಬಲಿಸಿದ್ದವು. ಆದರೆ ರಶ್ಯ ಹಾಗೂ ಚೀನಾಗಳು ನಿರ್ಣಯದ ವಿರುದ್ಧ ವಿಟೋ ಪ್ರಯೋಗಿಸಿದ್ದವು.

 ಸಿರಿಯದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಪರಮಮಿತ್ರನಾದ ರಶ್ಯವು , 2011ರಲ್ಲಿ ಸಿರಿಯದಲ್ಲಿ ಅಂತರ್ಯುದ್ಧ ಭುಗಿಲೆದ್ದಾಗಿನಿಂದ ಆ ದೇಶಕ್ಕೆ ಸಂಬಂಧಿಸಿದ ವಿವಿಧ ವಿವಾದಗಳಿಗೆ ಸಂಬಂಧಿಸಿ ವಿಶ್ವಸಂಸ್ಥೆಯಲ್ಲಿ 14 ಬಾರಿ ವಿಟೋ ಪ್ರಯೋಗಿಸಿತ್ತು.

 ಸಿರಿಯದ ಸಂತ್ರಸ್ತ ನಾಗರಿಕರಿಗೆ ಮಾನವೀಯ ನೆರವಿನ ಪೂರೈಕೆಯನ್ನು ಸ್ಥಗಿತಗೊಳಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ವಿಟೋ ಪ್ರಯೋಗಿಸಿರುವುದನ್ನು ವಿಶ್ವಸಂಸ್ಥೆಯಲ್ಲಿನ ರಶ್ಯದ ರಾಯಭಾರಿ ವಾಸ್ಸಿಲಿ ನೆಬೆನ್‌ಝಿಯಾ ಸಮರ್ಥಿಸಿಕೊಂಡಿದ್ದಾರೆ. ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಸಿರಿಯದ ಬಹುತೇಕ ಪ್ರಾಂತಗಳ ಮೇಲಿನ ನಿಯಂತ್ರಣವನ್ನು ಮರಳಿಪಡೆದುಕೊಂಡಿರುವುದರಿಂದ ಈ ನಿರ್ಣಯವನ್ನು ನಿಷ್ಪ್ರಯೋಜಕವೆಂದು ಅವರು ಬಣ್ಣಿಸಿದ್ದಾರೆ.

ಆದರೆ ವಿಶ್ವಸಂಸ್ಥೆಯ ಮಾನವೀಯ ನೆರವಿನ ವಿಭಾಗವು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಿರಿಯದಲ್ಲಿ ಚಳಿಗಾಲ ಆಗಮಿಸಿರುವುದರಿಂದ ಸಂತ್ರಸ್ತರ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಹೇಳಿದ್ದಾರೆ. ಗಡಿಯಾಚೆಯಿಂದ ನೆರವು ಪೂರೈಕೆಯಿಂದಾಗಿ ನಲ್ವತ್ತು ಲಕ್ಷಕ್ಕೂ ಅಧಿಕ ಸಿರಿಯ ನಾಗರಿಕರು ನೇರ ಪ್ರಯೋಜನ ಪಡೆದುಕೊಂಡಿದ್ದಾರೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News