ಆಸ್ಪತ್ರೆಗೆ ನುಗ್ಗಿದ ಪೊಲೀಸರ ಕ್ರಮ ಖಂಡಿಸಿದ ಭಾರತೀಯ ವೈದ್ಯಕೀಯ ಸಂಘ

Update: 2019-12-22 18:25 GMT

ಹೊಸದಿಲ್ಲಿ, ಡಿ.22: ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ಗಲಭೆಗ್ರಸ್ತ ಪ್ರದೇಶಗಳಲ್ಲಿದ್ದ ಆಸ್ಪತ್ರೆಗಳನ್ನು ಪ್ರವೇಶಿಸಿದ್ದಾರೆ ಎಂಬ ವರದಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘ(ಐಎಂಎ), ಆಸ್ಪತ್ರೆಗಳನ್ನು ಸುರಕ್ಷಿತ ವಲಯವೆಂದು ಘೋಷಿಸುವಂತೆ ಆಗ್ರಹಿಸಿದೆ.

ಪೊಲೀಸರ ಕ್ರಮ ಸ್ವೀಕಾರಾರ್ಹವಲ್ಲ ಎಂದಿರುವ ಐಎಂಎ, ವೈದ್ಯಕೀಯ ವ್ಯವಸ್ಥೆಯನ್ನು ಸುರಕ್ಷಿತವಾಗಿಡಬೇಕು ಎಂದು ತಿಳಿಸಿದೆ. ಆಸ್ಪತ್ರೆಯ ವಾರ್ಡ್‌ಗಳಿಗೆ, ತುರ್ತು ಚಿಕಿತ್ಸಾ ಘಟಕಗಳಿಗೆ ಮನಬಂದಂತೆ ಪ್ರವೇಶಿಸುವ ಘಟನೆಗಳು ಪುನರಾವರ್ತನೆಯಾಗುತ್ತಿದೆ. ಪೊಲೀಸ್ ಸಿಬಂದಿ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ಘಟಕದ ಬಾಗಿಲನ್ನು ಬಲಪ್ರಯೋಗಿಸಿ ತೆರೆಯುವ ಘಟನೆಯ ವಿಡಿಯೋ ದೃಶ್ಯಾವಳಿ ಈ ಹೊಸ ಬೆಳವಣಿಗೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಐಎಂಎ ಹೇಳಿಕೆ ತಿಳಿಸಿದೆ.

ರಾಷ್ಟ್ರದ ನಾಗರಿಕರ ಜೀವನದಲ್ಲಿ ನಡೆದಿರುವ ಅತ್ಯಂತ ಅಸಭ್ಯ ಘಟನೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯ ಮೇಲೆ, ವೈದ್ಯರ ಮೇಲೆ ನಡೆಯುತ್ತಿರುವ ಆಕ್ರಮಣ, ಹಲ್ಲೆಯನ್ನು ಗಮನಿಸಿದರೆ ಇದು ಅನಿರೀಕ್ಷಿತವಲ್ಲ. ಆದರೆ ಈ ಬಾರಿಯ ಘಟನೆಗೆ ಇರುವ ವ್ಯತ್ಯಾಸವೆಂದರೆ ಇದು ಆಡಳಿತವು ಸಂಯಮ ಕಳೆದುಕೊಂಡ ಘಟನೆಯಾಗಿದೆ ಎಂದು ಸಂಘದ ಹೇಳಿಕೆ ತಿಳಿಸಿದೆ.

ಗುರುವಾರ ರಾತ್ರಿ ಮಂಗಳೂರಿನ ಫಳ್ನೀರ್ ಪ್ರದೇಶದ ಹೈಲ್ಯಾಂಡ್ ಆಸ್ಪತ್ರೆಗೆ ಪೊಲೀಸರು ಪ್ರವೇಶಿಸಿ ಐಸಿಯು ವಿಭಾಗದ ಬಾಗಿಲನ್ನು ಒದ್ದ ವೀಡಿಯೊ ದೃಶ್ಯಾವಳಿಯನ್ನು ಉಲ್ಲೇಖಿಸಿ ಐಎಂಎ ಈ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News