×
Ad

ಪತಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ: ಪತ್ನಿ ಸುಮನಾ ಆರೋಪ

Update: 2019-12-23 17:38 IST

ಉಡುಪಿ, ಡಿ. 23: ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಕೆಲಸ ಮಾಡುತ್ತಿರುವ ನನ್ನ ಪತಿ ಹರೀಶ್ ಬಂಗೇರ (32) ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಠಿಸಿ ಸೌದಿ ದೊರೆ ಹಾಗೂ ಮಕ್ಕಾ ಮಸೀದಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದ್ದು, ಈ ಆರೋಪದಡಿಯಲ್ಲಿ ಸೌದಿ ಅರೇಬಿಯಾ ಪೊಲೀಸರು ನನ್ನ ಪತಿಯನ್ನು ಡಿ. 22ರಂದು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹರೀಶ್ ಬಂಗೇರರ ಪತ್ನಿ ಸುಮನಾ ದೂರಿದ್ದಾರೆ.

ಈ ಸಂಬಂಧ ಸೋಮವಾರ ದೂರು ನೀಡಲು ಉಡುಪಿ ಜಿಲ್ಲಾ ಎಸ್ಪಿ ಕಚೇರಿಗೆ ಆಗಮಿಸಿದ ಕುಂದಾಪುರ ತಾಲೂಕಿನ ಕೋಟೇಶ್ವರದ ಬೀಜಾಡಿ ಗ್ರಾಮದ ಗೋಯಾಡಿಬೆಟ್ಟು ನಿವಾಸಿಯಾಗಿರುವ ಸುಮನಾ, ಮಾಧ್ಯಮದ ವರೊಂದಿಗೆ ಮಾತನಾಡುತ್ತ, ನಿರಾಪರಾಧಿಯಾಗಿರುವ ನನ್ನ ಪತಿಯನ್ನು ಬಿಡುಗಡೆಗೊಳಿಸುವ ಮೂಲಕ ನ್ಯಾಯ ಒದಗಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಲಾಗಿದೆ ಎಂದರು.

ತಪ್ಪಿಗೆ ಕ್ಷಮೆ ಕೇಳಿದ್ದರು

ಕಳೆದ ಆರು ವರ್ಷಗಳಿಂದ ದಮ್ಮಾಮ್‌ನ ಗಲ್ಫ್ ಕಾರ್ಟೂನ್ ಫ್ಯಾಕ್ಟರಿಯಲ್ಲಿ ಏರ್ ಕಂಡೀಷನ್ ಟಿಕ್ನೀಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ಅವರು, ಡಿ.19ರಂದು ಬೇರೆಯವರು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೌರತ್ವ ಕಾಯಿದೆ ಸಂಬಂಧಿಸಿದ ವಿಡಿಯೋವನ್ನು ಶೇರ್ ಮಾಡಿದ್ದರು. ಈ ವಿಚಾರದಲ್ಲಿ ಕೆಲವರು ಫೋನ್ ಮಾಡಿ ಬೆದರಿಕೆಯೊಡ್ಡಿದ್ದರು. ಆ ಹಿನ್ನೆಲೆಯಲ್ಲಿ ಅವರು ಕ್ಷಮೆ ಕೇಳಿ ವೀಡಿಯೊ ಅಪ್‌ಲೋಡ್ ಮಾಡಿದ್ದರು.

ಅದೇ ದಿನ ರಾತ್ರಿ ಅವರು ತನ್ನ ಫೇಸ್‌ಬುಕ್ ಖಾತೆಯನ್ನು ಡಿಆ್ಯಕ್ಟಿವ್ ಮಾಡಿದರು. ಡಿ.20ರಂದು ತನ್ನ ಪತಿಯ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಠಿಸಿ, ಅದರಲ್ಲಿ ಸೌದಿ ದೊರೆ ಹಾಗೂ ಮಕ್ಕಾ ಮಸೀದಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧಿ ಕಮೆಂಟ್ಸ್‌ಗಳು ಬಂದಿದ್ದು, ಸಾಮಾಜಿಕ ತಾಣಗಳಲ್ಲಿ ಇಡೀ ಸೌದಿ ಅರೇಬಿಯಾ ದಲ್ಲಿ ವೈರಲ್ ಮಾಡಲಾಗಿತ್ತು ಎಂದು ಸುಮನಾ ತಿಳಿಸಿದರು.

ನಕಲಿ ಖಾತೆ ಡಿಲೀಟ್

‘ಈ ಹಿನ್ನೆಲೆಯಲ್ಲಿ ಹರೀಶ್ ಬಂಗೇರ ತನ್ನ ಪೇಸ್‌ಬುಕ್ ಖಾತೆಯನ್ನು ಮತ್ತೆ ಅಕ್ಟಿವ್ ಮಾಡಿ ಆ ಮೂಲಕ ತನ್ನ ಹೆಸರಿ ನಲ್ಲಿರುವ ನಕಲಿ ಖಾತೆಯ ಬಗ್ಗೆ ಪೋಸ್ಟ್ ಮಾಡಿದ್ದರು. ಡಿ. 22ರಂದು ಬೆಳಗ್ಗೆ ಇವರು ಕೆಲಸ ಮಾಡಿಕೊಂಡಿದ್ದ ಮೆನೇಜರ್ ಹಾಗೂ ಇತರರು ಇವರನ್ನು ಅಲ್ಲಿನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಆಗ ಕೆಲವರು ಇವರ ಫೋಟೋವನ್ನು ತೆಗೆದು ಬಂಧಿಸಲಾಗಿದೆ ಎಂದು ಪೋಸ್ಟ್ ಹಾಕಿದ್ದರು’ ಎಂದು ಸುಮನಾ ತಿಳಿಸಿದರು.

ಹರೀಶ್ ಬಂಗೇರ ಬಂಧನ ಆಗುತ್ತಿರುವ ಪೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ಬರುತ್ತಿದ್ದಂತೆ ಡಿ.22ರಂದು ರಾತ್ರಿ 8.30ರ ಸುಮಾರಿಗೆ ಅವರ ಹೆಸರಿನಲ್ಲಿದ್ದ ನಕಲಿ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡಲಾಗಿದೆ. ಈ ಖಾತೆಯನ್ನು ಕಾಸರಗೋಡಿನಲ್ಲಿ ರಚಿಸಲಾಗಿದೆ ಎಂಬ ಮಾಹಿತಿ ಪೊಲೀಸರಿಂದ ಲಭ್ಯವಾಗಿದೆ ಎಂದು ಪತ್ನಿ ಸುಮನಾ ತಿಳಿಸಿದರು.

ವಿಚಾರಣೆಗೆ ಭಾಷೆಯ ಸಮಸ್ಯೆ: ‘ಬೆಳಗ್ಗೆಯವರೆಗೆ ಪೋನ್ ಸಂಪರ್ಕಕ್ಕೆ ಸಿಗುತ್ತಿದ್ದ ಪತಿ ನಂತರ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಗೆಳೆಯ ಸಂತೆಕಟ್ಟೆಯ ಜಾನ್ಸನ್ ಎಂಬವರ ಮೂಲಕ ಎಲ್ಲ ಮಾಹಿತಿಯನ್ನು ಪಡೆದು ಕೊಳ್ಳಲಾಗುತ್ತಿದೆ. ಅವರ ಫೋನ್ ಹಾಗೂ ಇತರ ದಾಖಲೆಗಳನ್ನು ಪೊಲೀಸರು ತೆಗೆದಿರಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ’ ಎಂದು ಅವರು ಹೇಳಿದರು.

ನನ್ನ ಪತಿಗೆ ಹಿಂದಿ ಮತ್ತು ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಅಲ್ಲಿನ ಪೊಲೀಸರಿಗೆ ಅರಬಿ ಮತ್ತು ಇಂಗ್ಲಿಷ್ ಭಾಷೆ ಮಾತ್ರ ಅರ್ಥವಾಗುವುದು. ಇದರಿಂದ ವಿಚಾರಣೆಗೆ ತೊಡಕಾಗಿದ್ದು, ಭಾಷಾಂತರಕಾರರು ಹುಡುಕಾಟ ನಡೆಸಲಾಗುತ್ತಿದೆ. ಇಂದು ಭಾಷಾಂತರಕಾರರು ಬರುತ್ತಾರೆ ಎಂಬ ಮಾಹಿತಿ ದೊರೆತಿದೆ ಎಂದು ಅವರು ತಿಳಿಸಿದರು.

ಉಡುಪಿ ಸೆನ್‌ಗೆ ಪತ್ನಿ ದೂರು

ಡಿ.21ರಂದು ಈ ಕುರಿತು ಹರೀಶ್ ಪತ್ನಿ ಸಮನಾ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ‘ತನ್ನ ಗಂಡ ಸುಮಾರು ಐದು ವರ್ಷಗಳಿಂದ ಹರೀಶ್ ಬಂಗೇರ ಎಸ್. ಹೆಸರಿನಲ್ಲಿ ಫೇಸ್‌ಬುಕ್ ಖಾತೆ ಹೊಂದಿದ್ದು, ಇದೀಗ ಹರೀಶ್ ಬಂಗೇರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಖಾತೆ ತೆರೆದು ಮುಸ್ಲಿಂ ವಿರೋಧಿಯಾಗಿ ಪೋಸ್ಟ್ ಮಾಡಿದ್ದಾರೆ. ಆದುದರಿಂದ ತನ್ನ ಗಂಡನ ಹೆಸರಿನಲ್ಲಿರುವ ನಕಲಿ ಖಾತೆಯನ್ನು ಡಿಲೀಟ್ ಮಾಡಿಕೊಡಬೇಕು ಎಂದು ಸುಮನಾ ದೂರಿನಲ್ಲಿ ತಿಳಿಸಿದ್ದರು.

ಜನವರಿಯಲ್ಲಿ ಊರಿಗೆ ಬಂದಿದ್ದರು

ದಿ.ಸಂಜೀವ ಬಂಗೇರ ಹಾಗೂ ಸಿದ್ದು ದಂಪತಿಯ ಪುತ್ರ ಹರೀಶ್ ಬಂಗೇರ, ಒಂಭತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು, ತನ್ನ ಪತ್ನಿ ಸುಮನಾ, ಎರಡು ವರ್ಷದ ಹೆಣ್ಣು ಮಗು ಅನಿಷ್ಕಾ ಜೊತೆ ಬೀಜಾಡಿ ಗ್ರಾಮದ ಗೋಯಾಡಿ ಬೆಟ್ಟು ಎಂಬಲ್ಲಿರುವ ಬಾಡಿಗೆ ಮನೆಯಲ್ಲಿ ಕಳೆದ ಎಂಟು ವರ್ಷಗಳಿಂದ ವಾಸ ವಾಗಿದ್ದಾರೆ. ಸಂಜೀವ ಬಂಗೇರರ ಮೂವರು ಗಂಡು, ಓರ್ವ ಹೆಣ್ಣು ಮಕ್ಕಳಲ್ಲಿ ಹರೀಶ್ ಬಂಗೇರ ಕೊನೆ ಮಗ.

ಆರು ವರ್ಷಗಳ ಹಿಂದೆ ಸೌದಿಗೆ ತೆರಳಿದ್ದ ಹರೀಶ್ ಬಂಗೇರ, ಕಾರ್ಟೂನ್ ಫ್ಯಾಕ್ಟರಿಯಲ್ಲಿ ಮೆಶಿನ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಎರಡೂವರೆ ವರ್ಷಗಳ ಹಿಂದೆ ಏರ್ ಕಂಡೀಷನ್ ಟಿಕ್ನೀಷಿಯನ್ ಆಗಿ ಭರ್ತಿ ಹೊಂದಿದ್ದ ಇವರು, 2019ರ ಜ.4ಕ್ಕೆ ಊರಿಗೆ ಬಂದು, ಮಾ.4ರಂದು ವಾಪಾಸ್ಸು ಸೌದಿಗೆ ತೆರಳಿದ್ದರು.

ಸೌದಿ ರಾಯಭಾರಿ ಕಛೇರಿಗೆ ಮಾಹಿತಿ: ಎಸ್ಪಿ

ಹರೀಶ್ ಬಂಗೇರರ ಪತ್ನಿಯ ದೂರಿನ ಹಿನ್ನೆಲೆಯಲ್ಲಿ ಡಿ.22ರಂದು ಉಡುಪಿ ಸೆನ್ ಪೊಲೀಸರು ನಕಲಿ ಫೇಸ್‌ಬುಕ್ ಖಾತೆ ಎಂದು ಆರೋಪಿಸಲಾದ ಹರೀಶ್ ಬಂಗೇರ ಎಂಬ ಹೆಸರಿನ ಖಾತೆಯ ರಿಜಿಸ್ಟ್ರೇಷನ್ ಮತ್ತು ಆಕ್ಸೆಸ್ ವಿವರಗಳನ್ನು ನೀಡುವಂತೆ ಹಾಗೂ ನಕಲಿ ಫೇಸ್‌ಬುಕ್ ಖಾತೆಯನ್ನು ಡಿಲಿಟ್ ಮಾಡುವಂತೆ ಫೇಸ್‌ಬುಕ್ ಕಂಪೆನಿಗೆ ಕೋರಿಕೆ ಪತ್ರವನ್ನು ಕಳುಹಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಈ ವಿಷಯದ ಕುರಿತು ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯ ಭಾರಿ ಕಚೇರಿಗೂ ಕೂಡಲೇ ಮಾಹಿತಿ ನೀಡಲಾಗುವುದು ಮತ್ತು ಮುಂದಿನ ಬೆಳವಣಿಗೆಯ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News