ಗೋಲಿಬಾರ್ ನ್ಯಾಯಾಂಗ ತನಿಖೆಯೇ ಸೂಕ್ತ: ಎನ್.ಎಸ್. ಕರೀಂ
ಮಂಗಳೂರು, ಡಿ.23: ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಗರದಲ್ಲಿ ನಡೆದ ಪ್ರತಿಭಟನೆ ಸಂದರ್ಭದ ಹಿಂಸಾಚಾರ, ಗೋಲಿಬಾರ್ ಹತ್ಯೆ ಕುರಿತು ಹೈಕೋರ್ಟ್ ಹಾಲಿ ನ್ಯಾಯಾಧೀಶದರಿಂದ ನ್ಯಾಯಾಂಗ ತನಿಖೆಯೇ ಸೂಕ್ತ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಮ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯಾವುದೇ ನಿಯಮ ಪಾಲಿಸದೆ ಏಕಾಏಕಿ ಗುಂಡು ಹಾರಾಟ ನಡೆಸಿ, ಇಬ್ಬರ ಹತ್ಯೆ ಮಾಡಿರುವುದು ಖಂಡನೀಯ. ಅವರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ, ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಕೆಲಸ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಪೌರತ್ವ ಕಾಯಿದೆಯು ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಇರುವುದರಿಂದ ಕಾಂಗ್ರೆಸ್ ವಿರೋಧಿಸುತ್ತಾ ಬರುತ್ತಿದೆ. ಸಂವಿಧಾನದಲ್ಲಿ ಪ್ರತಿಭಟನೆ ಅವಕಾಶ ನೀಡಿದ್ದರೂ, ಕೇಂದ್ರವು ರಾಜ್ಯ ಸರಕಾರ ಅದನ್ನು ದಮನಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.
ಮಂಗಳೂರು ತಾಲೂಕು ಪಂ. ಅಧ್ಯಕ್ಷ ಮೊಹಮ್ಮದ್ ಮೋನು ಮಾತನಾಡಿ, ಹಿಂಸಾಚಾರದಿಂದ ತಮ್ಮದೇ ಕ್ಷೇತ್ರದಲ್ಲಿ ಸಾವು, ನೋವು ಸಂಭವಿಸಿದಾಗ ಸುಮ್ಮನಿದ್ದ ಶಾಸಕ ವೇದವ್ಯಾಸ ಕಾಮತ್, ಮೃತರದ ಮನೆ, ಗಾಯಾಳುಗಳನ್ನು ನೋಡಲೂ ಹೋಗಿಲ್ಲ. ಈಗ ಘಟನೆಗೆ ಶಾಸಕ ಖಾದರ್ ಕಾರಣ ಎಂದು ಗೂಬೆ ಕೂರಿಸುವ ಪ್ರಯತ್ನ ಮಾಡಿರುವುದು ಖಂಡನೀಯ ಎಂದರು.
ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಲಾರೆನ್ಸ್, ಕೋಶಾಧಿಕಾರಿ ಇ.ಕೆ. ರಫೀಕ್ ಕಣ್ಣೂರು, ಕಾರ್ಯದರ್ಶಿ ಝಕರಿಯಾ ಮಲಾರ್, ಸದಸ್ಯ ಝಕರಿಯಾ ಮಲಾರ್, ಯುವ ಕಾಂಗ್ರೆಸ್ ಮುಖಂಡ ಯು.ಬಿ.ಸಲೀಂ, ಬೆಳ್ಮ ಗಾಮ ಪಂ. ಉಪಾಧ್ಯಕ್ಷ ಸಿ.ಎಂ. ಅಬ್ದುಲ್ ಸತ್ತಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.