ಸಿಎಎ ವಿರೋಧಿ ಆಂದೋಲನಕ್ಕೆ ತೆರಿಗೆ ಹಣ ಬಳಕೆ ಆರೋಪ: ಮಮತಾ ಸರಕಾರದಿಂದ ವಿವರಣೆ ಕೇಳಿದ ಹೈಕೋರ್ಟ್

Update: 2019-12-23 15:36 GMT

ಕೋಲ್ಕತಾ,ಡಿ.23: ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರವು ತೆರಿಗೆ ಪಾವತಿದಾರರ ಹಣವನ್ನು ಪೌರತ್ವ ಕಾಯ್ದೆ ವಿರೋಧಿ ಆಂದೋಲನಕ್ಕೆ ಬಳಸಿಕೊಳ್ಳಲಾಗುತ್ತಿದೆಯೆಂಬ ಆರೋಪಗಳಿಗೆ ಉತ್ತರಿಸುವಂತೆ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಸೂಚಿಸಿದೆ.

ಪೌರತ್ವ ಕಾಯ್ದೆ ವಿರೋಧಿ ಚಳವಳಿಗಳಿಗೆ ತೆರಿಗೆಪಾವತಿದಾರರ ಹಣವನ್ನು ಬಳಸಿಕೊಳ್ಳಲಾಗಿದೆಯೆಂಬ ಅರ್ಜಿದಾರರ ಆರೋಪದ ಬಗ್ಗೆ ವಿಸ್ತೃತ ವಿವರಣೆ ನೀಡುವಂತೆಯೂ ಮುಖ್ಯ ನ್ಯಾಯಮೂರ್ತಿ ಟಿ.ಆರ್.ಎನ್. ರಾಧಾಕೃಷ್ಣನ್ ಹಾಗೂ ಅಜಿತ್ ಬ್ಯಾನರ್ಜಿ ಅವರನ್ನೊಳಗೊಂಡ ನ್ಯಾಯಪೀಠವು ತಿಳಿಸಿದೆ.

 ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಡಚಣೆಉಂಟಾಗಿರುವುದು ಹಾಗೂ ರೈಲ್ವೆ ಆಸ್ತಿಗೆ ಹಾನಿಮಾಡಲಾಗುವ ಕುರಿತ ದೂರುಗಳನ್ನು ಕೂಡಾ ನ್ಯಾಯಾಲಯವು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಸಾರ್ವಜನಿಕ ಸೊತ್ತುಗಳ ನಷ್ಟವನ್ನು ತಡೆಗಟ್ಟಲು ತೆಗೆದುಕೊಳ್ಳಲಾದ ಕ್ರಮಗಳು ಹಾಗೂ ಹಿಂಸಾತ್ಮಕ ಪ್ರತಿಭಟನೆಯ ಸಂದರ್ಭದಲ್ಲಿ ಉಂಟಾದ ಹಾನಿಗಳಿಗೆ, ಆರ್ಥಿಕ ಪರಿಹಾರವನ್ನು ನೀಡಿರುವ ಬಗ್ಗೆ ವರದಿ ಸಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

ಸರಕಾರದ ಪರವಾಗಿ ವಾದಿಸಿದ ನ್ಯಾಯವಾದಿ ಕಿಶೋರ್ ದತ್ತಾ ಅವರು ಪಶ್ಚಿಮಬಂಗಾಳದಲ್ಲಿ ಕಾನೂನು ಮತ್ತು ಶಿಸ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ ಹಾಗೂ ಇಂಟರ್‌ನೆಟ್ ಸೇವೆಗಳನ್ನು ಪುನರಾಂಭಿಸಲಾಗಿದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ ಒಂದು ವಾರದಿಂದ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ರಾಜಧಾನಿ ಕೋಲ್ಕತಾದಲ್ಲಿ ನಡೆಯುತ್ತಿರುವ ಹಲವಾರು ರ್ಯಾಲಿಗಳ ನೇತೃತ್ವವನ್ನು ಮಮತಾ ಬ್ಯಾನರ್ಜಿ ವಹಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News