ದೇಶದ ಆರ್ಥಿಕತೆ ತೀವ್ರ ಸವಾಲನ್ನು ಎದುರಿಸುತ್ತಿದೆ: ಗಡ್ಕರಿ

Update: 2019-12-23 15:41 GMT

ಹೊಸದಿಲ್ಲಿ,ಡಿ.23: ದೇಶದ ಆರ್ಥಿಕತೆಯು ತೀವ್ರ ಸವಾಲನ್ನು ಎದುರಿಸುತ್ತಿದ್ದು, ಅದಕ್ಕೆ ಸ್ಪಂದಿಸಲು ಕೆಲವೊಂದು ತುರ್ತು ನಿರ್ಧಾರಗಳನ್ನು ಕೈಗೊಳ್ಳ ಬೇಕಾಗಿದೆಯೆಂದು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.

ಭಾರತದಲ್ಲಿ ಅರ್ಥಿಕ ಹಿಂಜರಿತವುಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ವ್ಯಾಪಕವಾದ ಟೀಕೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಗಡ್ಕರಿಯವರು ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ಕೆಲವು ಹಿರಿಯ ಅಧಿಕಾರಿಗಳನ್ನು ಕರೆದು, 89 ಸಾವಿರ ಕೋಟಿ ರೂ. ಮೊತ್ತದ ಅರ್ಥಿಕ ಅಪರಾಧದ ಪ್ರಕರಣಗಳಿ ರುವುದಾಗಿ ತಾನು ಅವರಿಗೆ ತಿಳಿಸಿರುವುದಾಗಿ ಹೇಳಿದರು. ‘‘ನೀವು ಏನು ಮಾಡಬೇಕೆಂದು ನಾನು ಹೇಳುವುದಿಲ್ಲ. ಆದರೆ ದೇಶವು ಅತ್ಯಂತ ಸವಾಲಿನ ಸನ್ನಿವೇಶವನ್ನು ಹಾದುಹೋಗುತ್ತಿದೆಯೆಂದಷ್ಟೇ ನಾನು ಹೇಳುತ್ತಿದ್ದೇನೆ. ಇಲ್ಲಿ ನಗದು ಹರಿವಿನ ಕೊರತೆ ಕಂಡುಬರುತ್ತಿದೆ ಹಾಗೂ ನಿರ್ಧಾರಗಳನ್ನು ತಕ್ಷಣವೇ ಕೈಗೊಳ್ಳಬೇಕಾಗಿದೆ’’ ಎಂದರು.

ಜುಲೈ-ಸೆಪ್ಟೆಂಬರ್‌ಗೆ ಅಂತ್ಯಗೊಡ ದ್ವಿತೀಯ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು ಶೇ.4.5ಕ್ಕೆ ಕುಸಿದಿದ್ದು, ಇದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಠವಾಗಿದೆ. ಅಲ್ಲದೆ ಕಳೆದ ಆರು ತ್ರೈಮಾಸಿಕಗಳಿಂದ ಜಿಡಿಪಿಯು ನಿರಂತರವಾಗಿ ಕುಸಿಯುತ್ತಲೇ ಬಂದಿದೆ.

ದೇಶದ ಆರ್ಥಿಕತೆಯು ಮಹಾ ಹಿಂಜರಿತವನ್ನು ಕಾಣುತ್ತಿದೆ.  ಕೇಂದ್ರ ಸರಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯಂ ಈ ತಿಂಗಳ ಆರಂಭದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯ ಸಂಭಾವ್ಯ ಬೆಳವಣಿಗೆಯನ್ನು ವಿಶ್ವಬ್ಯಾಂಕ್ 6.5 ಶೇಕಡದಿಂದ 5.1 ಶೇಕಡಕ್ಕೆ ಇಳಿಸಿದ ಹಿನ್ನೆಲೆಯಲ್ಲಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News