ತುಳು ರಾಜ್ಯದ ಅಧಿಕೃತ ಭಾಷೆಯಾಗಲಿ: ಕತ್ತಲ್‌ಸಾರ್
ಮಂಗಳೂರು, ಡಿ.23: ಜನಗಣತಿ ಸಂದರ್ಭ ತುಳುವರು ಮಾತೃಭಾಷೆಯ ಕಾಲಂನಲ್ಲಿ ತುಳು ಹೆಸರನ್ನು ನಮೂದಿಸಬೇಕು. ತುಳು ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಬೇಕಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯಿಂದ ನಗರದ ಉರ್ವಸ್ಟೋರ್‌ನ ತುಳುಭವನದಲ್ಲಿ ಸೋಮವಾರ ನಡೆದ ‘ಚಾವಡಿ ತಮ್ಮನ ಬೊಕ್ಕ’ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಳು ನಾಟಕ, ಯಕ್ಷಗಾನ, ಜಾನಪದ ಕ್ಷೇತ್ರಗಳಲ್ಲಿ ದುಡಿದು ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಅನೇಕ ಮಹನೀಯರು ನಮ್ಮ ನಡುವೆ ಇದ್ದಾರೆ. ಅವರನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಆ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸಿದಂತಾಗುತ್ತದೆ. ತುಳುವಿಗಾಗಿ ಕೆಲಸ ಮಾಡಿದ ಸಾಧಕರನ್ನು ಅಕಾಡಮಿ ಗಮನಕ್ಕೆ ತಂದರೆ ಅವರನ್ನು ಗೌರವಿಸಲಾಗುವುದು ಎಂದರು.
ಸಂಗೀತ ನಿದೇರ್ಶಕ ನಾರಾಯಣ ಬಿ.ಕೆ. ಅವರಿಗೆ ಚಾವಡಿ ತಮ್ಮನ ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ನಾರಾಯಣ ಬಿ.ಕೆ., ಸಂಗೀತ ಕ್ಷೇತ್ರದಲ್ಲಿ ದುಡಿದ ನಾನು ಸನ್ಮಾನದ ನಿರೀಕ್ಷೆ ಮಾಡಿರಲಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ ಕಾರಣ ಈ ಸನ್ಮಾನ ದೊರೆತಿದೆ ಎಂದು ಭಾವಿಸುತ್ತೇನೆ. ಪ್ರಚಾರ ಬಯಸದೇ ತುಳುವಿಗಾಗಿ ಕೆಲಸ ಮಾಡಿದವರನ್ನು ಗುರುತಿ ಸುವ ಕಾರ್ಯ ನಡೆಯಬೇಕಿದೆ ಎಂದರು.
ಹಿರಿಯ ನಾಟಕಕಾರ ಸಂಜೀವ ದಂಡೆಕೇರಿ ಸನ್ಮಾನಿಸಿದರು. ನಟ, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅಭಿನಂದನಾ ಭಾಷಣ ಮಾಡಿದರು. ಅಕಾಡಮಿ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ ಸ್ವಾಗತಿಸಿದರು. ಅಕಾಡಮಿ ರಿಜಿಸ್ಟ್ರಾರ್ ರಾಜೇಶ್ ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ತಾರಾ ಉಮೇಶ್ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ವಿಜಯಲಕ್ಷ್ಮಿ ಪಿ. ರೈ ವಂದಿಸಿದರು. ಅಕಾಡಮಿ ಸದಸ್ಯರಾದ ಕಡಬ ದಿನೇಶ ರೈ, ಲೀಲಾಕ್ಷ ಕರ್ಕೆರಾ, ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು.