ದೇಶ ತಪ್ಪಾದ ಜನರಿಂದ ನಡೆಯುತ್ತಿದೆ: ಶಿವಸೇನೆ ನಾಯಕ ಸಂಜಯ್ ರಾವತ್

Update: 2019-12-23 16:44 GMT

ಮುಂಬೈ, ಡಿ. 23: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಹಿನ್ನೆಲೆಯಲ್ಲಿ ಶಿವಸೇನೆಯ ನಾಯಕ ಸಂಜಯ್ ರಾವತ್ ಮಾರ್ಟಿನ್ ಲೂಥರ್ ಕಿಂಗ್ ಅವರ ಹೇಳಿಕೆ ಉಲ್ಲೇಖಿಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 “ಒಂದು ವೇಳೆ ರಾಜಕೀಯವು ಧಾರ್ಮಿಕ ಸಮಸ್ಯೆಗಳನ್ನು ಸೃಷ್ಟಿಸಿದರೆ, ದೇಶವು ತಪ್ಪಾದ ಜನರಿಂದ ನಡೆಯುತ್ತಿದೆ ಎಂದು ತಿಳಿಯಬೇಕು” ಎಂದು ಅವರು ಮಾರ್ಟಿನ್ ಲೂಥರ್ ಕಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

 ತನ್ನ ಮೈಕ್ರೊ ಬ್ಲಾಗಿಂಗ್ ಸೈಟ್‌ನಲ್ಲಿ ಹೇಳಿಕೆ ಪೋಸ್ಟ್ ಮಾಡಿರುವ ಸಂಜಯ್ ರಾವತ್, ಧಾರ್ಮಿಕ ಸಮಸ್ಯೆಗಳನ್ನು ರಾಜಕೀಯವಾಗಿ ಪರಿಹರಿಸುವ ದೇಶ ಶ್ರೇಷ್ಠವಾಗಿರುತ್ತದೆ. ಆದರೆ, ರಾಜಕೀಯ ಧಾರ್ಮಿಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದಾದರೆ, ರಾಷ್ಟ್ರವನ್ನು ತಪ್ಪಾದ ವ್ಯಕ್ತಿಗಳು ನಡೆಸುತ್ತಿದ್ದಾರೆ ಎಂದು ಅರಿತುಕೊಳ್ಳಬೇಕು ಎಂಬ ಮಾರ್ಟಿನ್ ಲೂಥರ್ ಕಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿರುವ ನಡುವೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುತ್ತಿದೆ ಎಂದು ಆರೋಪಿಸುತ್ತಿದೆ.

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಗೆ ಈ ತಿಂಗಳ ಆರಂಭದಲ್ಲಿ ಅನುಮೋದನೆ ನೀಡಲಾಗಿತ್ತು. ಅನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದರು. ಈ ನೂತನ ಕಾಯ್ದೆ ಪಾಕಿಸ್ತಾನ, ಬಾಗ್ಲಾದೇಶ ಹಾಗೂ ಅಫಘಾನಿಸ್ಥಾನದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ 2014 ಡಿಸೆಂಬರ್ 31ರ ಒಳಗೆ ಭಾರತಕ್ಕೆ ಆಗಮಿಸಿದವರಿಗೆ ಭಾರತೀಯ ಪೌರತ್ವ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಮುಖ್ಯವಾಗಿ ಈಶಾನ್ಯ ವಲಯದಲ್ಲಿ ಈ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಆದರೆ, ಬಿಜೆಪಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಈ ಕಾಯ್ದೆಯನ್ನು ಬೆಂಬಲಿಸಿ ರ್ಯಾಲಿಗಳನ್ನು ನಡೆಸುತ್ತಿದೆ. ಈ ಕಾಯ್ದೆ ಧರ್ಮದ ಆಧಾರದಲ್ಲಿ ಜನರನ್ನು ವಿಭಜಿುವುದಿಲ್ಲ ಎಂದು ಬಿಜೆಪಿ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News