ಅರ್ಜೆಂಟೀನದಲ್ಲಿ ಪುಸ್ತಕ ಕದ್ದ ಮೆಕ್ಸಿಕೊ ರಾಯಭಾರಿ; ರಾಜೀನಾಮೆ
ಮೆಕ್ಸಿಕೊ ಸಿಟಿ, ಡಿ. 23: ಅರ್ಜೆಂಟೀನಾಗೆ ಮೆಕ್ಸಿಕೊದ ರಾಯಭಾರಿ ರಿಕಾರ್ಡೊ ವಲೇರೊ ಅನಾರೋಗ್ಯದ ಕಾರಣ ನೀಡಿ ರವಿವಾರ ರಾಜೀನಾಮೆ ನೀಡಿದ್ದಾರೆ. ಅವರು ಅಕ್ಟೋಬರ್‌ನಲ್ಲಿ ಅಂಗಡಿಯೊಂದರಿಂದ 10 ಡಾಲರ್ ಬೆಲೆಯ ಪುಸ್ತಕವೊಂದನ್ನು ಕಳವು ಮಾಡಿದ ವೀಡಿಯೊವೊಂದು ಬಯಲಾದ ಬಳಿಕ ಈ ಬೆಳವಣಿಗೆ ನಡೆದಿದೆ.
ರಿಕಾರ್ಡೊ ಅಕ್ಟೋಬರ್ 26ರಂದು ಅಜೇಂಟೀನದ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿರುವ ಪ್ರಸಿದ್ಧ ಪುಸ್ತಕ ಮಳಿಗೆಯೊಂದರಲ್ಲಿ ಪುಸ್ತಕವೊಂದನ್ನು ತೆಗೆದು ತನ್ನ ಕಂಕುಳಲ್ಲಿ ಇರಿಸಿದ್ದ ಪತ್ರಿಕೆಯೊಂದರ ಪುಟಗಳ ನಡುವೆ ಅಡಗಿಸಿಡುವುದು ಸಿಸಿಟಿವಿ ಕ್ಯಾಮೆರಗಳಲ್ಲಿ ದಾಖಲಾಗಿತ್ತು.
ಅವರು ಕಳವು ಮಾಡಿರುವ ಪುಸ್ತಕವು 18ನೇ ಶತಮಾನದ ಇಟಲಿ ಲೇಖಕ, ಸೈನಿಕ ಮತ್ತು ಬೇಹುಗಾರ ಗಿಯಾಕೊಮೊ ಕ್ಯಾಸನೋವರ ಆತ್ಮಚರಿತ್ರೆ ಎನ್ನಲಾಗಿದೆ. ಓರ್ವ ಮನಸೆಳೆಯುವ ಸಾಹಸಿಗನಾಗಿ ಗಿಯಾಕೊಮೊ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ.
ಈ ಘಟನೆ ಬೆಳಕಿಗೆ ಬಂದ ಬಳಿಕ, ಮೆಕ್ಸಿಕೊದ ವಿದೇಶ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ರಿಕಾರ್ಡೊರನ್ನು ಮೆಕ್ಸಿಕೊಗೆ ಕರೆಸಿಕೊಂಡಿತ್ತು.
ನರ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ರಾಯಭಾರಿ: ಮೆಕ್ಸಿಕೊ
ರಿಕಾರ್ಡೊ ವಲೇರೊ ರಾಜೀನಾಮೆಯನ್ನು ಮೆಕ್ಸಿಕೊ ವಿದೇಶ ಸಚಿವಾಲಯವು ರವಿವಾರ ಅಂಗೀಕರಿಸಿದೆ.
‘‘ರಿಕಾರ್ಡೊ ವಲೇರೊ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರು ನರಗಳಿಗೆ ಸಂಬಂಧಪಟ್ಟ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ’’ ಎಂದು ಮೆಕ್ಸಿಕೊ ವಿದೇಶ ಸಚಿವ ಮಾರ್ಸಿಲೊ ಎಬ್ರಾರ್ಡ್ ತನ್ನ ಟ್ವಿಟರ್ ಪುಟದಲ್ಲಿ ಬರೆದಿದ್ದಾರೆ.
ಇನ್ನೊಂದು ಪ್ರಕರಣ: ಅಂಗಿ ಕಳವು!
ಅರ್ಜೆಂಟೀನಾಗೆ ಮೆಕ್ಸಿಕೊದ ರಾಯಭಾರಿ ರಿಕಾರ್ಡೊ ವಲೇರೊ ಅರ್ಜೇಂಟೀನದಲ್ಲಿ ಇನ್ನೊಂದು ಕಳವು ಪ್ರಕರಣದಲ್ಲಿ ಸಿಲುಕಿರುವುದು ಬೆಳಕಿಗೆ ಬಂದಿದೆ.
ಡಿಸೆಂಬರ್ 10ರಂದು ಬ್ಯೂನಸ್ ಐರಿಸ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಅಂಗಡಿಯೊಂದರಲ್ಲಿ ಅವರು ಅಂಗಿಯೊಂದನ್ನು ಕಳವು ಮಾಡಿರುವುದು ಸಿಸಿಟಿವಿ ಕ್ಯಾಮರಗಳಲ್ಲಿ ದಾಖಲಾಗಿದೆ ಎಂದು ಅರ್ಜೆಂಟೀನದ ಮಾಧ್ಯಮಗಳು ವರದಿ ಮಾಡಿವೆ.
ಮೆಕ್ಸಿಕೊ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಎರಡು ದಿನಗಳ ಮೊದಲು ಈ ಕಳವು ನಡೆದಿದೆ.