ಆಸ್ಪತ್ರೆಯಲ್ಲಿ ಪೊಲೀಸ್ ದೌರ್ಜನ್ಯ ಸಮರ್ಥಿಸಿಕೊಂಡ ವೈದ್ಯರ ಸಂಘದ ಹೇಳಿಕೆ ತಪ್ಪು : ಡಾ. ಯೂಸುಫ್ ಕುಂಬ್ಳೆ
ಮಂಗಳೂರು, ಡಿ. 24: ಮಂಗಳೂರಿನ ಹೈ ಲ್ಯಾಂಡ್ ಆಸ್ಪತ್ರೆಯೊಳಗೆ ನುಗ್ಗಿ ಡಿ.19 ರಂದು ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಮಂಗಳೂರಿನ ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ನ ನಡೆ ಸರಿಯಲ್ಲ ಎಂದು ಖ್ಯಾತ ಹೃದಯ ತಜ್ಞ, ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗು ಇಂಡಿಯಾನಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಹೇಳಿದ್ದಾರೆ. ಈಗಾಗಲೇ ಇದನ್ನು ನಾನು ಸಂಸ್ಥೆಯ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ಮಾಡಿದ್ದು ಸರಿ ಹಾಗು ಆಸ್ಪತ್ರೆಯಲ್ಲಿದ್ದವರು ದುಷ್ಕರ್ಮಿಗಳು ಎಂದು ಹೇಳುವ ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ಅವರ ಹೆಸರು ಇರುವ ಬಗ್ಗೆ ಡಾ. ಯೂಸುಫ್ ಕುಂಬ್ಳೆ ಅವರಲ್ಲಿ ವಾರ್ತಾಭಾರತಿ ಕೇಳಿದಾಗ "ನಮ್ಮ ಸಂಸ್ಥೆಯ ಈ ಹೇಳಿಕೆ ಸರಿಯಲ್ಲ. ಅದನ್ನು ಅವರು ನಮ್ಮ ಗಮನಕ್ಕೆ ತರದೆ ನೀಡಿದ್ದಾರೆ" ಎಂದು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ ಅದು ನಡೆದಿಲ್ಲ ಎಂದು ಹೇಳುವುದೇ ತಪ್ಪು. ಇನ್ನು ಆಸ್ಪತ್ರೆಯಲ್ಲಿದ್ದವರು ದುಷ್ಕರ್ಮಿಗಳು ಎಂದು ವೈದ್ಯರು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅದು ತನಿಖೆಯಲ್ಲಿ ತಿಳಿದು ಬರಬೇಕಾದ ವಿಷಯ. ಆಸ್ಪತ್ರೆಯಲ್ಲಿ ಇದ್ದವರು ಯಾವಾಗಲೂ ಆಸ್ಪತ್ರೆಗಳಲ್ಲಿ ಸಮಸ್ಯೆ ಸೃಷ್ಟಿಸುವವರು ಎಂಬ ಹೇಳಿಕೆ ಕೂಡ ತಪ್ಪು. ಯಾರು ಸಮಸ್ಯೆ ಸೃಷ್ಟಿಸಿದ್ದಾರೆ ಎಂದು ವೈದ್ಯರ ಸಂಘ ಸಾರಾಸಗಟಾಗಿ ಹೇಗೆ ತೀರ್ಪು ನೀಡಲು ಸಾಧ್ಯ ? ಎಂದವರು ಪ್ರಶ್ನಿಸಿದ್ದಾರೆ.
ಪೋಲೀಸರ ನಡೆಯನ್ನು ಸಂಪೂರ್ಣವಾಗಿ ಸಮರ್ಥಿಸಿಕೊಳ್ಳುವುದು ವೈದ್ಯರ ಕೆಲಸ ಅಲ್ಲ. ಅದು ನ್ಯಾಯಾಲಯದ ಕೆಲಸ. ನಾವು ಹಾಗೆ ಯಾವುದೇ ವಿಷಯದ ಬಗ್ಗೆ ಸರಿಯಾಗಿ ವಿಶ್ಲೇಷಿಸದೆ ತೀರ್ಪು ನೀಡಿದಂತೆ ಮಾತಾಡುವುದು ತಪ್ಪು ಎಂದು ಡಾ. ಯೂಸುಫ್ ಕುಂಬ್ಳೆ ಹೇಳಿದ್ದಾರೆ.