×
Ad

ಮಂಗಳೂರು ಹಿಂಸಾಚಾರಕ್ಕೆ ಮೂವರು ಪೊಲೀಸ್ ಅಧಿಕಾರಿಗಳು ಕಾರಣ : ಮಾಜಿ ಮೇಯರ್ ಕೆ. ಅಶ್ರಫ್

Update: 2019-12-24 14:22 IST

ಮಂಗಳೂರು, ಡಿ.24: ‘ಗುಂಡೋ... ಕಲ್ಲೋ... ನನ್ನ ತಲೆಗೆ ಪೊಲೀಸರ ಕಡೆಯಿಂದಲೇ ಏಟು ಬಿದ್ದಿದೆ’ ಮಂಗಳೂರು ಹಿಂಸಾಚಾರಕ್ಕೆ ಮೂವರು ಪೊಲೀಸ್ ಅಧಿಕಾರಿಗಳು ಕಾರಣ ಎಂದು ಮಾಜಿ ಮೇಯರ್ ಕೆ. ಅಶ್ರಫ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾಚಾರದ ವೇಳೆ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ‘ವಾರ್ತಾಭಾರತಿ’ಯ ಜೊತೆ ಮಾತನಾಡಿ ‘ಗುರುವಾರ ಪೊಲೀಸರು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದುಕೊಂಡ ನಾನು ನೇರ ಘಟನೆಯ ಸ್ಥಳಕ್ಕೆ ಧಾವಿಸಲು ಮುಂದಾದೆ. ಅಷ್ಟರಲ್ಲಿ ನನ್ನ ಪರಿಚಯಸ್ಥರು ಸ್ಥಳಕ್ಕೆ ಬರಬೇಡಿ, ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಸೂಚಿಸಿದರು. ಆದಾಗ್ಯೂ ನಾನು ಹೈಲ್ಯಾಂಡ್ ಮತ್ತು ವೆನ್ಲಾಕ್ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದೆ. ಈ ಮಧ್ಯೆ ಮಾಜಿ ಸಚಿವ ಯು.ಟಿ.ಖಾದರ್‌ರನ್ನೂ ಸಂಪರ್ಕಿಸಿ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ಚರ್ಚೆ ನಡೆಸಿದೆ. ಅಷ್ಟರಲ್ಲಿ ನನ್ನೊಂದಿಗೆ ಇದ್ದ ಮುಸ್ತಫಾ ಅವರ ಮೊಬೈಲ್‌ಗೆ ಕರೆ ಮಾಡಿದ ಪೊಲೀಸ್ ಆಯುಕ್ತರು ‘ಎಲ್ಲಿದ್ದರೂ ಸ್ಟೇಟ್‌ಬ್ಯಾಂಕ್ ಕಡೆಗೆ ಬನ್ನಿ’ ಎಂದು ಮನವಿ ಮಾಡಿದರು. ಹಾಗೇ ನಾನು ಸ್ಟೇಟ್‌ಬ್ಯಾಂಕ್ ಕಡೆಗೆ ಧಾವಿಸಿದೆ. ಅಲ್ಲಿಂದ ಬಂದರ್ ಕಡೆಗೆ ಕಮಿಷನರ್ ಜೊತೆಯೇ ತೆರಳಿದೆ. ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದೆ. ಈ ಮಧ್ಯೆ ಪೊಲೀಸರು ಯದ್ವಾತದ್ವ ಲಾಠಿ ಬೀಸುತ್ತಿದ್ದರು, ಅಶ್ರುವಾಯಿ ಸಿಡಿಸುತ್ತಿದ್ದರು. ಫೈರಿಂಗ್ ಮಾಡುತ್ತಿದ್ದರು. ಆದರೆ ಅಲ್ಲಿ ಅದ್ಯಾವುದನ್ನೂ ಮಾಡುವ ಆವಶ್ಯಕತೆಯೇ ಇರಲಿಲ್ಲ. ಯಾಕೆಂದರೆ ಅಲ್ಲಿದ್ದುದು ಕೇವಲ 200 ಮಂದಿ ಮಾತ್ರ. ಆದಾಗ್ಯೂ ಜನರನ್ನು ಸಮಾಧಾನಪಡಿಸಲು ಸ್ನೇಹಿತರ ಜೊತೆಗೂಡಿ ಹೆಜ್ಜೆ ಹಾಕುತ್ತಿದ್ದೆ. ಅಷ್ಟರಲ್ಲಿ ನನ್ನ ತಲೆಗೊಂದು ಏಟು ಬಿದ್ದಿದೆ. ಅದು ಕಲ್ಲೋ, ಗುಂಡೇಟೋ ಗೊತ್ತಿಲ್ಲ. ಆದರೆ, ಅದು ಪೊಲೀಸರ ಕಡೆಯಿಂದಲೇ ಬಿದ್ದುದು ಅಂತೂ ಸ್ಪಷ್ಟ’ ಎಂದು ಹೇಳಿದರು.

ಮಂಗಳೂರಿನಲ್ಲಿ ನಡೆದ ಎಲ್ಲಾ ದುರ್ಘಟನೆಗೆ ಪೊಲೀಸ್ ಕಮಿಷನರ್ ಡಾ. ಪಿ.ಎಸ್. ಹರ್ಷ, ಇನ್‌ಸ್ಪೆಕ್ಟರ್‌ಗಳಾದ ಶಾಂತಾರಾಮ ಕುಂದರ್, ಶರೀಫ್ ಅವರೇ ಕಾರಣ. ಕಮಿಷನರ್ ಸೂಚನೆಯ ಮೇರೆಗೆ ಈ ಇಬ್ಬರು ಇನ್‌ಸ್ಪೆಕ್ಟರ್‌ಗಳು ಅನಾಗರಿಕರಂತೆ ವರ್ತಿಸಿದರು. ಇತರ ಪೊಲೀಸರನ್ನೂ ಹಿಂಸಾಚಾರಕ್ಕೆ ಪ್ರೋತ್ಸಾಹಿಸಿದರು. ಪ್ರತಿಭಟನೆ, ಧರಣಿ, ಹೋರಾಟ ನಮಗೆಲ್ಲಾ ಹೊಸತಲ್ಲ. ನಾವು ಹಲವು ಪ್ರತಿಭಟನೆಯನ್ನು ಮಾಡಿದ್ದೇವೆ. ಆವಾಗ ಏನೂ ಆಗಿಲ್ಲ. ಆದರೆ ಮೊನ್ನೆ ಸೇರಿದ್ದು ಕೇವಲ 200 ಮಂದಿ. ಅವರನ್ನು ನಿಯಂತ್ರಿಸಲಾಗದಿದ್ದರೆ ಇವರೆಂಥ ಪೊಲೀಸ್ ಅಧಿಕಾರಿಗಳು ? ಎಂದು ಆಕ್ರೋಶದಿಂದ ಪ್ರಶ್ನಿಸಿದ ಅಶ್ರಫ್, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಕಾನುನು ರೀತಿಯಲ್ಲಿ ಕ್ರಮ ಜರುಗಿಸಬೇಕು. ಆವಾಗ ಮಾತ್ರ ಈ ಪೊಲೀಸ್ ಅಧಿಕಾರಿಗಳಿಗೆ ಪಾಪ-ಪುಣ್ಯದ ನೆನಪು ಬರುತ್ತದೆ. ಬುದ್ಧಿ ಬರುತ್ತದೆ ಎಂದು ನುಡಿದರು.

ಇದೆಲ್ಲಾ ಯಾರದೋ ಸೂಚನೆಯ ಮೇರೆಗೆ ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯವಾಗಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ನನ್ನಂತೆ ಹಲವು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನದು ಬಿಡಿ... ಅದೆಷ್ಟೋ ಮಂದಿ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಕಷ್ಟಪಡುವ ಮಾಹಿತಿಯನ್ನು ಈಗಷ್ಟೇ ತಿಳಿದುಕೊಂಡೆ. ಈ ನಿಟ್ಟಿನಲ್ಲೂ ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಶ್ರಫ್ ನುಡಿದರು.

‘ನನ್ನ ಈ ಮಗನಿಗೆ ಬಡವರನ್ನು ಕಂಡರೆ ತುಂಬಾ ಪ್ರೀತಿ. ಅನ್ಯಾಯ-ಅಕ್ರಮದ ವಿರುದ್ಧ ಸದಾ ಹೋರಾಟ ಮಾಡುತ್ತಾ ಬಂದಿದ್ದಾನೆ. ಅಂತಹ ಮಗನನ್ನೇ ಪೊಲೀಸರು ಗುರಿಯಾಗಿಸಿಕೊಂಡು ಈಗ ಆಸ್ಪತ್ರೆಯಲ್ಲಿ ಮಲಗುವಂತೆ ಮಾಡಿದ್ದಾರೆ. ಯಾವ ತಂದೆ-ತಾಯಿಗೂ ಇಂತಹ ಪರಿಸ್ಥಿತಿ ಆಗಬಾರದು’ ಎಂದು ಆಸ್ಪತ್ರೆಯಲ್ಲೇ ಇದ್ದ ಅಶ್ರಫ್‌ರ ತಂದೆ ಇಬ್ರಾಹೀಂ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News