ಪೇಜಾವರಶ್ರೀ ಆರೋಗ್ಯದಲ್ಲಿ ಅಲ್ಪ ಚೇತರಿಕೆ : ಡಾ. ಸತ್ಯನಾರಾಯಣ

Update: 2019-12-24 09:07 GMT

ಉಡುಪಿ, ಡಿ.24: ನ್ಯುಮೋನಿಯ ಹಾಗೂ ಉಸಿರಾಟದ ತೊಂದರೆಗಾಗಿ ಡಿ.20ರ ಮುಂಜಾನೆಯಿಂದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಮಠದ ಹಿರಿಯ ಯತಿಗಳಾದ ವಿಶ್ವೇಶತೀರ್ಥಶ್ರೀ (89) ಆರೋಗ್ಯ ಮೊದಲ ದಿನಕ್ಕೆ ಹೋಲಿಸಿದರೆ ಸಾಕಷ್ಟು ಚೇತರಿಸಿಕೊಂಡಿದ್ದು, ಆದರೆ ಈಗಲೂ ಅವರು ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದಾರೆ ಎಂದು ಕೆಎಂಸಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಮಣಿಪಾಲ ಮತ್ತು ಬೆಂಗಳೂರಿನ ತಜ್ಞರು ತಿಳಿಸಿದ್ದಾರೆ.

ಕೆಎಂಸಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಒಟ್ಟಾಗಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಬೆಂಗಳೂರಿನ ಮಣಿಪಾಲ ಸಮೂಹ ಆಸ್ಪತ್ರೆಯ ತುರ್ತು ಚಿಕಿತ್ಸೆ ವಿಭಾಗದ ಶ್ವಾಸಕೋಶ ತಜ್ಞ ವೈದ್ಯರಾದ ಡಾ. ರಾಜೇಶ್ ಶೆಟ್ಟಿ ಮತ್ತು ಡಾ. ಸತ್ಯನಾರಾಯಣ ಮಾತನಾಡಿ, ಶ್ರೀಗಳು ಇಲ್ಲಿಗೆ ದಾಖಲಾದ ದಿನದ ಆರೋಗ್ಯಕ್ಕೆ ಹೋಲಿಸಿದರೆ ಈಗ ತುಂಬಾ ಪ್ರಗತಿ ಕಾಣಿಸಿದೆ. ಅವರೀಗ 90 ವರ್ಷ ಸಮೀಪದಲ್ಲಿರುವುದರಿಂದ ಅವರ ಪ್ರಗತಿ ತೀರಾ ನಿಧಾನಗತಿಯಲ್ಲಿದೆ ಎಂದರು.

ಅವರೀಗಲೂ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ. ನ್ಯುಮೋನಿಯಾ ಜ್ವರದ ಸೋಂಕು ಅವರ ಶ್ವಾಸಕೋಶವನ್ನು ವ್ಯಾಪಿಸಿದ್ದರಿಂದ ಉಸಿರಾಟಕ್ಕೆ ತೊಂದರೆ ಇದೆ. ವಯಸ್ಸಿನ ಕಾರಣ ಇದು ತೀರಾ ನಿಧಾನವಾಗಿ ಕಡಿಮೆಯಾಗಬೇಕಾಗಿದೆ. ಇಲ್ಲಿಗೆ ಬಂದಾಗ ಅವರಿಗೆ ನ್ಯುಮೋನಿಯಾ ಹಾಗೂ ಉಸಿರಾಟದ ಸಮಸ್ಯೆ ಅಲ್ಲದೇ ಇನ್ನು ಕೆಲವು ಸಮಸ್ಯೆಗಳಿದ್ದವು. ಆದರೆ ಈಗ ಅವೆಲ್ಲವೂ ನಿವಾರಣೆಯಾಗಿವೆ. ಅವರ ಉಳಿದೆಲ್ಲಾ ಅಂಗಗಳು ಚೆನ್ನಾಗಿಯೇ ಕಾರ್ಯ ನಿವಹಿಸುತ್ತಿವೆ. ವಯಸ್ಸಾಗಿರುವುದರಿಂದ ಆರೋಗ್ಯ ಸುಧಾರಣೆಗೆ ಇನ್ನಷ್ಟು ಸಮಯ ಬೇಕು ಎಂದು ಡಾ. ಸತ್ಯನಾರಾಯಣ ನುಡಿದರು.

ನ್ಯುಮೋನಿಯಾ ಗುಣವಾಗಲು ಸಾಮಾನ್ಯವಾಗಿ 6 ರಿಂದ 8 ವಾರಗಳು ಬೇಕಾಗುತ್ತದೆ. ಆದರೆ ಶ್ರೀಗಳಿಗೆ 90 ವರ್ಷ ಆಗಿರುವುದರಿಂದ ಇದು ತಿಂಗಳು- ಎರಡು ತಿಂಗಳು ತೆಗೆದುಕೊಳ್ಳಬಹುದು. ಅಥವಾ ಮನೋಬಲದಿಂದ ತಿಂಗಳೊಳಗೂ ಚೇತರಿಕೆ ಕಾಣಬಹುದು ಎಂದು ಡಾ.ರಾಜೇಶ್ ಶೆಟ್ಟಿ ತಿಳಿಸಿದರು.

ಕಳೆದ ರಾತ್ರಿ ಸ್ವಾಮೀಜಿಗೆ ಎಂಐಆರ್ ಸ್ಕಾನ್ ಮಾಡಲಾಗಿದೆ. ಅದರಲ್ಲಿ ಎಲ್ಲವೂ ಸಾಮಾನ್ಯವಾಗಿದ್ದು, ಯಾವುದೇ ಅನಿರೀಕ್ಷವಾದ ಬದಲಾವಣೆ ಕಂಡು ಬಂದಿಲ್ಲ. ಶ್ವಾಸಕೋಶದ ಸೋಂಕಿಗಾಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವೆಂಟಿಲೇಟರ್ ಮೂಲಕ ಕೃತಕ ಉಸಿರಾಟ ಮುಂದುವರಿಸಲಾಗುವುದು ಎಂದರು.

ಹೆಚ್ಚಿನ ಚಿಕಿತ್ಸೆಗಾಗಿ ಪೇಜಾವರಶ್ರೀಗಳನ್ನು ಬೆಂಗಳೂರು ಅಥವಾ ಹೊಸದಿಲ್ಲಿಯ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗುವುದು ಎಂಬ ವದಂತಿಯ ಕುರಿತು ಸ್ಪಷ್ಟೀಕರಣ ಕೇಳಿದಾಗ ಉತ್ತರಿಸಿದ ಡಾ.ಸತ್ಯನಾರಾಯಣ, ಇವೆಲ್ಲವೂ ಶುದ್ಧ ವಂದತಿಗಳು ಹಾಗೂ ಗಾಳಿ ಸುದ್ದಿಗಳು. ಇಂಥ ಯಾವ ಉದ್ದೇಶ ಹಾಗೂ ಅದರ ಅಗತ್ಯವೂ ಉದ್ಭವವಾಗಿಲ್ಲ. ಇಲ್ಲಿ ನೀಡುವ ಚಿಕಿತ್ಸೆ ಅತ್ಯುತ್ತಮವಾಗಿದೆ. ಇದೇ ಅಭಿಪ್ರಾಯವನ್ನು ಏಮ್ಸ್‌ನ ವೈದ್ಯರೂ ವ್ಯಕ್ತಪಡಿಸಿದ್ದಾರೆ. ಅವರಿಗೆ ಕೆಎಂಸಿಯಲ್ಲೇ ಚಿಕಿತ್ಸೆ ಮುಂದುವರಿಯಲಿದೆ ಎಂದರು.

ಅವರ ರಕ್ತಸಂಚಾರ, ರಕ್ತದಲ್ಲಿ ಆಮ್ಲಜನಕದ ಪ್ರಮಾಣ, ರಕ್ತ ಒತ್ತಡ ಎಲ್ಲರೂ ನಿರೀಕ್ಷಿತ ಮಟ್ಟದಲ್ಲಿದ್ದು, ನ್ಯುಮೋನಿಯಾ ಹೊರತು ಪಡಿಸಿ ಉಳಿದಂತೆ ಬೇರೆ ಯಾವುದೇ ಸಮಸ್ಯೆ ಕಂಡುಬರುತ್ತಿಲ್ಲ. ವಯೋಮಾನದ ಕಾರಣದಿಂದ ಚೇತರಿಸಿ ತೀರಾ ನಿಧಾನಗತಿಯಲ್ಲಿದೆ ಎಂದು ಡಾ.ರಾಜೇಶ್ ಶೆಟ್ಟಿ ಹಾಗೂ ಡಾ.ಸತ್ಯನಾರಾಯಣ ಸ್ಪಷ್ಚಪಡಿಸಿದರು.

ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಕಳೆದ ರವಿವಾರದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಇಬ್ಬರು ತಜ್ಞ ವೈದ್ಯರು ಶ್ರೀಗಳ ಚಿಕಿತ್ಸೆಯಲ್ಲಿ ಮಣಿಪಾಲ ತಜ್ಞ ವೈದ್ಯರ ಜೊತೆಗೂಡಿದಿದ್ದಾರೆ. ಅಲ್ಲದೇ ಹೊಸದಿಲ್ಲಿಯ ಏಮ್ಸ್ (ಎಐಐಎಂಎಸ್) ಆಸ್ಪತ್ರೆಯ ತಜ್ಞ ವೈದ್ಯರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇವೆ. ಗಂಟೆಗೊಮ್ಮೆ ಅವರಿಗೆ ಶ್ರೀಗಳ ಆರೋಗ್ಯದ ಸ್ಥಿತಿ-ಗತಿಯ ಮಾಹಿತಿ ನೀಡಿ ಅವರ ಸಲಹೆಯನ್ನೂ ಪಡೆಯಲಾಗುತ್ತಿದೆ. ಅವರು ಇಲ್ಲಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಸಹಮತ ಹೊಂದಿದ್ದಾರೆ ಎಂದರು.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ನಿರಂತರವಾಗಿ ತಮ್ಮ ಸಂಪರ್ಕದಲ್ಲಿದ್ದು, ಶ್ರೀಗಳ ಚಿಕಿತ್ಸೆಗೆ ಬೇಕಾದ ಎಲ್ಲಾ ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವೂ ತಮ್ಮ ಸಂಪರ್ಕದಲ್ಲಿದೆ ಎಂದು ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.

ಸ್ವಾಮೀಜಿಗಳ ಆರೋಗ್ಯದ ಕುರಿತು ಆಸ್ಪತ್ರೆಯಲ್ಲಿರುವ ಪೇಜಾವರ ಮಠದ ಕಿರಿಯ ಸ್ವಾಮೀಜಿ ಶ್ರೀವಿಶ್ವಪ್ರಸನ್ನ ತೀರ್ಥರಿಗೆ ಎಲ್ಲಾ ಮಾಹಿತಿಗಳನ್ನು ನೀಡಲಾಗುತ್ತಿದೆ. ಅವರಿಗೆ ಪ್ರತಿದಿನ ಮಾಡಬೇಕಾದ ಎಲ್ಲಾ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಆದರೆ ಗಂಭೀರವಾಗಿದೆ. ಅವರ ಆರೋಗ್ಯ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಎಂಸಿಯ ಡೀನ್ ಡಾ. ಶರತ್ ಕೆ.ರಾವ್, ಶ್ವಾಸಕೋಶ ಹಾಗೂ ತುರ್ತುಚಿಕಿತ್ಸೆ ತಜ್ಞರಾದ ಡಾ.ಮಂಜುನಾಥ ಹಂದೆ ಮತ್ತು ಡಾ.ವಿಶಾಲ ಶ್ಯಾನುಭಾಗ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News