'ಪೊಲೀಸರ ದೌರ್ಜನ್ಯ'ದ ದೃಶ್ಯಗಳನ್ನು ಪೋಸ್ಟ್ ಮಾಡಿದ ಟ್ವಿಟರಿಗರು

Update: 2019-12-24 10:15 GMT

ಮಂಗಳೂರು: ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ವಿಡಿಯೋಗಳನ್ನು ಇ ಮೇಲ್ ಮಾಡುವಂತೆ ಮಂಗಳೂರು ಕಮಿಷನರ್ ಡಾ.ಪಿ. ಹರ್ಷ ಅವರು ಟ್ವೀಟ್ ಮಾಡಿದ್ದು, ಪೊಲೀಸ್ ದೌರ್ಜನ್ಯದ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಡಿಸೆಂಬರ್ 19ರಂದು ಮಂಗಳೂರು ನಗರದಲ್ಲಿ ನಡೆದ ಹಿಂಸಾಚಾರದ ಫೋಟೊ ಅಥವಾ ವಿಡಿಯೋಗಳನ್ನು mangalurunorthmgc@gmail.comಗೆ ಇ ಮೇಲ್ ಮಾಡುವಂತೆ ಅಥವಾ 9480802327 ಸಂಖ್ಯೆಗೆ ವಾಟ್ಸ್ಯಾಪ್ ಮಾಡುವಂತೆ ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದೇನೆ. ಸತ್ಯವನ್ನು ಎತ್ತಿಹಿಡಿಯುವಲ್ಲಿ ತನಿಖಾ ತಂಡಕ್ಕೆ ನೆರವಾಗಲಿದೆ" ಎಂದು ಪಿ. ಹರ್ಷ ಡಿಸೆಂಬರ್ 23ರಂದು ಟ್ವೀಟ್ ಮಾಡಿದ್ದರು.

ಕಮಿಷನರ್ ಅವರ ಟ್ವೀಟ್ ಗೆ ಹಲವರು ಪ್ರತಿಕ್ರಿಯಿಸಿದ್ದು, ಪೊಲೀಸ್ ದೌರ್ಜನ್ಯದ ವಿಡಿಯೋಗಳನ್ನು ಪೋಸ್ಟ್ ಮಾಡಿ ಇವರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

"ನೀವು ಮಾಧ್ಯಮಗಳಲ್ಲಿ ಹೇಳಿದ 7000 ಪ್ರತಿಭಟನಕಾರರು ಮತ್ತು ಅವರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದರು ಎನ್ನುವುದಕ್ಕೆ, 37 ಪೊಲೀಸರು ಗಾಯಗೊಂಡಿರುವುದಕ್ಕೆ ಸಾಕ್ಷಿಯಾಗಿ ನಿಮ್ಮಲ್ಲಿ ಯಾವುದಾದರೂ ಫೋಟೊಗಳು ಅಥವಾ ವಿಡಿಯೋಗಳಿದ್ದಲ್ಲಿ ಹಂಚಿಕೊಳ್ಳಿ" ಎಂದು ಟ್ವಿಟರಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

"ಈ ಮನವಿಯ ಹಿಂದಿನ ಉದ್ದೇಶವೇನು? ನೀವು ಸಿಐಡಿ ತಂಡದ ಸದಸ್ಯರೇ?, ಆ ನಂಬರ್ ಮತ್ತು ಐಡಿ ಯಾರದ್ದು?, ನೀವು ಈ ಸಂದೇಹಗಳನ್ನು ಪರಿಹರಿಸುವವರೆಗೆ ಸಾರ್ವಜನಿಕರು ಯಾವುದನ್ನೂ ಶೇರ್ ಮಾಡಬೇಡಿ. ಮಂಗಳೂರಿನ ಡಿಸಿಪಿಯ ಮಧ್ಯಪ್ರವೇಶವಿಲ್ಲದೆ ಸ್ವತಂತ್ರ ತನಿಖೆಯನ್ನು ನಾವು ಬಯಸುತ್ತೇವೆ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಲಾಠಿ ಬೀಸುತ್ತಿರುವ ವಿಡಿಯೋ  ಪೋಸ್ಟ್ ಮಾಡಿ 'ಇದೇನು?' ಎಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬ ಟ್ವಿಟರಿಗ ವಿಡಿಯೋವೊಂದನ್ನು ಪೋಸ್ಟ್ ಮಾಡಿ, "ಆರೆಸ್ಸೆಸ್ ಗೂಂಡಾಗಳು ಕಲ್ಲುತೂರಾಟ ನಡೆಸುತ್ತಿರುವುದು ಮತ್ತು ಸಾರ್ವಜನಿಕ ಸ್ವತ್ತನ್ನು ಹಾಳುಗಡೆವುತ್ತಿರುವುದು" ಎಂದಿದ್ದಾರೆ.

"ಸಿಸಿಬಿ ಪೊಲೀಸರು ಜನರನ್ನು ತಡೆದು ಅವರ ಹೆಸರುಗಳನ್ನು ಕೇಳುತ್ತಿರುವುದನ್ನು ನಾನು ನೋಡಿದೆ. ಜನರು ಮುಸ್ಲಿಮರಾಗಿದ್ದರೆ ಅವರು ದಾಳಿ ನಡೆಸುತ್ತಾರೆ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

"ನಿಮಗೂ ಹಾಗು ಬೆಂಗಳೂರು ಪೋಲಿಸರ ನಡುವೆ ಇರುವಂತಹ ವ್ಯತ್ಯಾಸ ಇಂದು ಇಡೀ ರಾಜ್ಯಕ್ಕೆ ಗೊತ್ತಾಗಿದೆ, ನೀವು ಮೊನ್ನೆ ಗೋಲಿಬಾರ್ ಮಾಡಲೇಬೇಕು ಎಂದು ತಯಾರಾಗಿ ಬಂದಿದ್ರಿ -ಅದನ್ನು ಸಾಧಿಸುವಲ್ಲಿಯೂ ಸಫಲರಾದವರು ನೀವು, ಬೆಂಗಳೂರಿನ ಪೋಲಿಸರನ್ನು ಮಾದರಿಯಾಗಿ ತೆಗೆದುಕೊಳ್ಳಿ, ಉತ್ತರಪ್ರದೇಶದ ಗೂಂಡಾ ಪೋಲಿಸರನ್ನಲ್ಲ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು ಹೈಲ್ಯಾಂಡ್ ಆಸ್ಪತ್ರೆಗೆ ನುಗ್ಗಿದ ಪೊಲೀಸರು ಆಸ್ಪತ್ರೆಯ ಕೊಠಡಿಯ ಬಾಗಿಲುಗಳಿಗೆ ಒದೆಯುತ್ತಿರುವ ವಿಡಿಯೋ ಪೋಸ್ಟ್ ಮಾಡಿ ಇದೇನು ಎಂದು ಕೇಳಿದ್ದಾರೆ.

ಮತ್ತೊಬ್ಬರು ಕದ್ರಿ ಪೊಲೀಸ್ ಇನ್ಸ್ ಪೆಕ್ಟರ್ ಅವರು "ಫೈರ್ ಮಾಡಿದ್ರೂ ಒಬ್ರೂ ಸತ್ತಿಲ್ಲ" ಎಂದು ಹೇಳುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News