'ಪೊಲೀಸ್ ಆಯುಕ್ತ ಹರ್ಷ ಸಹಿತ ತಪ್ಪಿತಸ್ಥ ಅಧಿಕಾರಿ'ಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಎಸ್‌ಡಿಪಿಐ ಒತ್ತಾಯ
ಮಂಗಳೂರು, ಡಿ. 24: ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಹರ್ಷ, ಡಿಸಿಪಿ ಅರುಣಾಂಶುಗಿರಿ ಸಹಿತ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಎಸ್‌ಡಿಪಿಐ ಒತ್ತಾಯಿಸಿದೆ.
ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಮಂಗಳೂರು ಗೋಲಿಬಾರ್‌ಗೆ ಪೊಲೀಸ್ ಆಯುಕ್ತ ಹರ್ಷ ಅವರೇ ಕಾರಣ. ಆಯುಕ್ತರ ಸೂಚನೆಯ ಮೇರೆಗೆ ಇತರ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ. ಹಾಗಾಗಿ ಹರ್ಷ ಸಹಿತ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು, ನ್ಯಾಯಾಂಗ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ಡಿ.19ರ ಪ್ರತಿಭಟನೆಗೆ ಎಸ್‌ಡಿಪಿಐ ಕರೆ ನೀಡಿರಲಿಲ್ಲ. ಮುಸ್ಲಿಂ ಸಂಘಟನೆಯೊಂದು ಪೊಲೀಸ್ ಅನುಮತಿ ಪಡೆದು ಪ್ರತಿಭಟನೆ ನಡೆಸಲು ಮುಂದಾಗಿತ್ತು. ಆದರೆ ಸಂಜೆಯ ವೇಳೆಗೆ ಸೆ.144 ಹಾಕಿ ಅವರಿಗೆ ನೀಡಿದ ಅನುಮತಿಯನ್ನು ವಾಪಸ್ ಪಡೆಯಲಾಯಿತು. ಈ ಸಂದರ್ಭ ಎಸ್‌ಡಿಪಿಐ ಮುಖಂಡರಾದ ರಿಯಾಝ್ ಫರಂಗಿಪೇಟೆ ಮತ್ತು ಶಾಹುಲ್ ಎಸ್.ಎಚ್. ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಲು ಬಿಟ್ಟ ಆಡಿಯೋ ಸಂದೇಶವನ್ನು ಆಧರಿಸಿ ಪೊಲೀಸ್ ಇಲಾಖೆಯು ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದೆ. ಹೀಗೆ ಪ್ರಕರಣ ದಾಖಲಿಸಿ ನಮ್ಮನ್ನು ಬಾಯ್ಮುಚ್ಚಿಸಲು ಸಾಧ್ಯವಿಲ್ಲ. ಮಂಗಳೂರು ಗೋಲಿಬಾರ್ ಮತ್ತು ದೇಶದ್ರೋಹಿ ಪ್ರಕರಣ ದಾಖಲಿಸಿರುವುದರ ವಿರುದ್ಧವೂ ಕಾನೂನು ಹೋರಾಟ ಮಾಡಲಿದ್ದೇವೆ. ನ್ಯಾಯ ಸಿಗುವವರೆಗೆ ನಾವು ಹೋರಾಟದಿಂದ ವಿರಮಿಸುವುದಿಲ್ಲ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಸಿದರು.
ಪೊಲೀಸರ ಅನಾಗರಿಕ ವರ್ತನೆ
ಆಯುಕ್ತ ಹರ್ಷ ಅವರಿಗಂತೂ ಸೌಜನ್ಯ, ಮಾನವೀಯತೆ ಇಲ್ಲ. ಗೌರವ ಕೊಡಲು ಗೊತ್ತೇ ಇಲ್ಲ. ಮಾಜಿ ಸಚಿವ, ಶಾಸಕ ಯುಟಿ ಖಾದರ್ ಜೊತೆಯೂ ಅವರು ಅನುಚಿತವಾಗಿ ವರ್ತಿಸಿದ್ದನ್ನು ಗಮನಿಸಿದ್ದೇವೆ. ಅವರಿಂದ ಪ್ರೇರಿತರಾದ ಪೊಲೀಸರು ಕೂಡ ಅನಾಗರಿಕರಂತೆ ವರ್ತಿಸಿದರು. ಪೊಲೀಸರು ಸಂಯಮದಿಂದ ವರ್ತಿಸಿದ್ದರೆ ಇಬ್ಬರು ಬಲಿಯಾಗುತ್ತಿರಲಿಲ್ಲ, ಲಾಠಿಜಾರ್ಜ್, ಅಶ್ರುವಾಯಿ, ಫೈರಿಂಗ್ ಮಾಡುವ ಅಗತ್ಯವೇ ಇರಲಿಲ್ಲ. ಆದರೆ, ಪೊಲೀಸರು ಉದ್ದೇಶಪೂರ್ವಕವಾಗಿ ಎಲ್ಲವನ್ನೂ ಮಾಡಿ ಇದೀಗ ತಮ್ಮಿಂದಾದ ತಪ್ಪನ್ನು ಪ್ರತಿಭಟನಾಕಾರರ ಮೇಲೆ ಹಾಕಲು ಮುಂದಾಗುತ್ತಿದ್ದಾರೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ರಾಜ್ಯ ಸಮಿತಿ ಸದಸ್ಯ ಜಲೀಲ್ ಕೆ., ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಬೆಳ್ಳಾರೆ, ಅಶ್ರಫ್ ಮಂಚಿ, ಕೋಶಾಧಿಕಾರಿ ನೂರುಲ್ಲಾ ಕುಳಾಯಿ, ಕಾರ್ಪೊರೇಟರ್ ಮುನೀಬ್ ಬೆಂಗರೆ ಮತ್ತಿತರರು ಉಪಸ್ಥಿತರಿದ್ದರು.