'ಮಂಗಳೂರು ಹಿಂಸಾಚಾರ' ಅಮಿತ್ ಶಾ ನಿರ್ದೇಶನದ ಮೇರೆಗೆ ನಡೆದ ಘಟನೆ: ಬಿ.ಕೆ. ಹರಿಪ್ರಸಾದ್ ಆರೋಪ
ಮಂಗಳೂರು, ಡಿ.24: ನಗರದಲ್ಲಿ ನಡೆದ ಹಿಂಸಾಚಾರ, ಗೋಲಿಬಾರ್ ಘಟನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶನದ ಮೇರೆಗೆ ಬಿಜೆಪಿ ಪದಾಧಿಕಾರಿಗಳು, ಕೆಲವು ಸಾಂಸ್ಕೃತಿಕ ಸಂಘಟನೆಗಳೆಂದು ಹೇಳಿಕೊಳ್ಳುವ ಸಂಘಟನೆಗಳ ಪದಾಧಿಕಾರಿಗಳೇ ನೇರವಾಗಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ದೇಶದ ಉದ್ದಗಲಕ್ಕೂ ವಿವಿಧ ಭಾಗಗಳಲ್ಲಿ ಸಿಎಎ ಹಾಗೂ ಎನ್‌ಆರ್‌ಸಿಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆಯಾದರೂ ಬಿಜೆಪಿ ಆಡಳಿತ ಇರುವಲ್ಲಿ ಮಾತ್ರವೇ ಗಲಭೆ ನಡೆಯುತ್ತಿದೆ. ಅದಕ್ಕಾಗಿ ನಗರದಲ್ಲಿ ನಡೆದ ಘಟನೆಯ ಕುರಿತಂತೆ ಸಮಗ್ರ ನ್ಯಾಯಾಂಗ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿಯ ಕೆಲವರು ಸಂವಿಧಾನ ಬದಲಾಯಿಸಬೇಕು ಎನ್ನುತ್ತಾರೆ. ಮತ್ತೆ ಕೆಲವರು ಕೆಲ ಸಮುದಾಯಗಳ ಮತ ಬೇಕಾಗಿಲ್ಲ ಎಂಬುದಾಗಿ ಮುಚ್ಚುಮರೆ ಇಲ್ಲದೆ ಹೇಳುತ್ತಾರೆ. ಮತೀಯ ಸಾಮರಸ್ಯ ಕೆಡಿಸುವ ಇಂತಹ ಮತೀಯ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಯಿಂದ ಆಗುತ್ತಿಲ್ಲ. ಅವರು ಕೇವಲ ಒಂದು ಸಂಘಟನೆಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರ ನೀಡಿದ ಜನಸಾಮಾನ್ಯರ ಪರ ಕೆಲಸ ಮಾಡಲಾಗುತ್ತಿಲ್ಲ. ಒಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ಲಾಠಿಚಾರ್ಜ್ ಮಾಡಬೇಡಿ ಎನ್ನುತ್ತಾರೆ. ಇಲ್ಲಿ ಪೊಲೀಸರು ಗೋಲಿಬಾರ್ ನಡೆಸುತ್ತಾರೆ. ಇದರರ್ಥ ಯಾರು ಯಾರ ನಿಯಂತ್ರಣದಲ್ಲಿದ್ದಾರೆಂಬುದೇ ತಿಳಿಯುತ್ತಿಲ್ಲ. ಯಡಿಯೂರಪ್ಪ ಓರ್ವ ದುರ್ಬಲ ಮುಖ್ಯಮಂತ್ರಿ. ಗೃಹ ಸಚಿವರು ಯಾವುದಕ್ಕೂ ಪ್ರಯೋಜನ ಇಲ್ಲದವರು. ಪೊಲೀಸರು ಸಂಘಟನೆಯ ಪದಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಪೊಲೀಸ್ ಆಯುಕ್ತರನ್ನು ಎತ್ತಂಗಡಿ ಮಾಡಬೇಕು. ಕೆಲ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಮೃತ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ಒದಗಿಸಬೇಕು. ಗಾಯಾಳುಗಳಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಕೋಮುವಾದ ಸೃಷ್ಟಿಸುವ ಎಲ್ಲಾ ಸಂಘಟನೆಯ ನಾಯಕರನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂಬುದು ನನ್ನ ಬೇಡಿಕೆ ಎಂದು ಅವರು ಹೇಳಿದರು.
ಯಾರೇ ಪ್ರಚೋದನಕಾರಿ ಹೇಳಿಕೆ ನೀಡಿದ್ದರೂ ಅವರನ್ನು ಹೊರಗಿಡಬೇಕು. ಯಾರೇ ಆಗಿದ್ದಲ್ಲಿ ಸರಿ. ನಾನು ದಕ್ಷಿಣ ಕನ್ನಡ ಜಿಲ್ಲೆಯವ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾಗಿ ಇಲ್ಲಿ ನಡೆಯುವ ಕೊಲೆ, ಷಡ್ಯಂತ್ರಗಳು ಜಿಲ್ಲೆಗೆ ಕೆಟ್ಟ ಹೆಸರು ತರುತ್ತಿದೆ. ವಿಷದ ವಾತಾವರಣ ಸೃಷ್ಟಿಸುವ ಕೆಲಸವಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಶಾಸಕ ಖಾದರ್ ಹೇಳಿಕೆ ಬಗ್ಗೆ ಮೌನ ತಾಳಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ಬಗ್ಗೆಯೂ ಮೌನವಹಿಸಿಲ್ಲ. ಪ್ರಚೋದನಾಕಾರಿ ಹೇಳಿಕೆ ಯಾರೇ ನೀಡಿದ್ದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸ್ ಅಧಿಕಾರಿಗಳು ಯಾವುದೇ ಸಂಘ ಸಂಸ್ಥೆಗಳ ಪರ ಕೆಲಸ ಮಾಡಲು ಆಗುವುದಿಲ್ಲ. ಪೊಲೀಸ್ ಆಯುಕ್ತರು ಕಲ್ಲಡ್ಕಕ್ಕೆ ತೆರಳಿ ಮಹಾನ್ ನಾಯಕನ ಕಾಲಿಗೆ ಬಿದ್ದು ಬರುತ್ತಾರೆ. ಅವರು ಐಪಿಎಸ್ ಅಧಿಕಾರಿ. ಅವರು ಸಂವಿಧಾನ ಬದ್ಧವಾಗಿ ಪ್ರತಿಜ್ಞೆ ಸ್ವೀಕರಿಸಿದವರು. ಸಂಘಟನೆಯವರ ಕಾಲಿಗೆ ಬೀಳಲು ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಪೊಲೀಸ್ ಆಯುಕ್ತರು ಇಂದು ಬಿಡುಗಡೆಗೊಳಿಸಿರುವ ವೀಡಿಯೊಗಳು ನಕಲಿ ಎಂಬ ಆರೋಪಗಳು ವ್ಯಕ್ತವಾಗುತ್ತಿವೆಯಲ್ಲಾ ಎಂಬ ಪ್ರಶ್ನೆಗೆ, ಪೊಲೀಸ್ ಆಯುಕ್ತರು ಕೆಲವು ಆಯ್ದ ವೀಡಿಯೊಗಳನ್ನು ಮಾತ್ರವೇ ಬಿಡುಗಡೆ ಮಾಡಿದ್ದಾರೆ. ಜನ ಸಮೂಹ ಪೊಲೀಸ್ ಠಾಣೆಗೆ ದಾಳಿ ಮಾಡಲು ಮುಂದಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ನಾನು ಠಾಣೆಗೆ ಹೋಗಿದ್ದೆ. ಆದರೆ ಅಲ್ಲಿನ ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ. ಬದಲಾಗಿ ಆಸ್ಪತ್ರೆಯಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿರುವುದು ನಾಚಿಕೆಗೇಡಿನ ವಿಚಾರ ಎಂದು ಹೇಳಿದರು.
ಗೋಷ್ಠಿಯಲ್ಲಿ ನಾಯಕರಾದ ಬಿ. ಇಬ್ರಾಹೀಂ, ಅಬ್ದುಲ್ ರವೂಫ್, ಶಾಹುಲ್ ಹಮೀದ್, ಪಿ.ವಿ. ಮೋಹನ್, ನವೀನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.
ಎನ್‌ಆರ್‌ಸಿಯೆಂದರೆ ರಾಷ್ಟ್ರೀಯ ಮತೀಯ ಗುರುತು ನೋಂದಣಿ
ಬಿಜೆಪಿಯ ಎನ್‌ಆರ್‌ಸಿ ರಾಷ್ಟ್ರೀಯ ಮತೀಯ ಗುರುತು ನೋಂದಣಿ ಎಂದು ಟೀಕಿಸಿದ ಬಿ.ಕೆ. ಹರಿಪ್ರಸಾದ್, ಈ ದೇಶದಲ್ಲಿ ಹುಟ್ಟಿದವರು ಪ್ರಮಾಣ ಪತ್ರ ಪಡೆಯಬೇಕಾಗಿಲ್ಲ. ತಮ್ಮ ಪದವಿ ಪ್ರಮಾಣ ಪತ್ರವನ್ನು ಒದಗಿಸಲಾಗದ ಪ್ರಧಾನಿಯವರು, ಸ್ಮೃತಿ ಇರಾನಿಯವರು ಭಾರತೀಯ ಜನನ ಪ್ರಮಾಣ ಪತ್ರವನ್ನು ಕೇಳುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ನನ್ನ ಗುರುತು ಪತ್ರಕ್ಕಾಗಿ ಯಾರಾದರೂ ಬಂದಲ್ಲಿ ನಾನು ನೋಂದಣಿ ಮಾಡುವುದಿಲ್ಲ. ಇದು ನನ್ನ ಜನ್ಮಸಿದ್ಧ ಹಕ್ಕು, ನಾನು ಈ ಮಣ್ಣಿನವ ಎಂದು ಪ್ರತಿಕ್ರಿಯಿಸಿದ್ದಾರೆ.