×
Ad

ಖರೀದಿಸಿದ ವಸ್ತುಗಳ ಬಿಲ್ ಪಡೆಯುವುದರಿಂದ ಮೋಸ ತಡೆಯಲು ಸಾಧ್ಯ: ಡಿಸಿ ಜಗದೀಶ್

Update: 2019-12-24 20:20 IST

ಉಡುಪಿ ಡಿ.24: ಪ್ರತಿಯೊಬ್ಬ ವ್ಯಕ್ತಿ ಕೂಡ ಗ್ರಾಹಕರಾಗಿರುತ್ತಾರೆ. ಗ್ರಾಹಕರ ಹಕ್ಕುಗಳ ಅನ್ವಯ ವಸ್ತುಗಳನ್ನು ಖರೀದಿಸುವಾಗ ಗ್ರಾಹಕರು ಬಿಲ್ ಪಡೆಯ ಬೇಕು. ಇದರಿಂದ ವಸ್ತುಗಳ ಖರೀದಿಯಲ್ಲಿ ಆಗುವ ಮೋಸವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಒಳಕಾಡು ಸರಕಾರಿ ಪ್ರೌಢಶಾಲೆಯ ನಲಂದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಿಎಸ್‌ಟಿಯಿಂದ ಹಣ ಉಳಿಸುವ ಕಾರಣಕ್ಕಾಗಿ ಗ್ರಾಹಕರು ಖರೀದಿಸಿದ ವಸ್ತುಗಳ ಬಿಲ್‌ಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತಾವು ತೆಗೆದುಕೊಂಡ ವಸ್ತುವಿನಲ್ಲಿ ನ್ಯೂನ್ಯತೆ ಉಂಟಾದಲ್ಲಿ ರಶೀದಿ ಇಲ್ಲದ ಕಾರಣ ಅಂಗಡಿ ಮಾಲೀಕರು ಅದಕ್ಕೆ ಸ್ಪಂದಿಸದೇ ಜನರು ಮೋಸ ಹೋಗುತ್ತಿದ್ದಾರೆ. ಆದ್ದರಿಂದ ಖರೀದಿಸುವ ಪ್ರತಿಯೊಂದು ವಸ್ತುಗಳಿಗೂ ಬಿಲ್ ಪಡೆಯುವ ಪರಿ ಪಾಠವನ್ನು ಬೆಳೆಸಿಕೊಳ್ಳಬೇಕು ಎಂದರು.

ವಸ್ತುಗಳ ಖರೀದಿ ವೇಳೆ ವಸ್ತುಗಳ ಅವಧಿ ಮುಗಿಯುವ ದಿನಾಂಕವನ್ನು ಪರಿಶೀಲಿಸಬೇಕು. ಅದು ಪ್ರಜ್ಞಾವಂತ ಗ್ರಾಹಕನ ಲಕ್ಷಣವಾಗಿದೆ. ಒಂದು ವೇಳೆ ಗ್ರಾಹಕರು ಮೋಸ ಹೋಗಿರುವ ಬಗ್ಗೆ ತಿಳಿದ ಬಳಿಕವೂ ನಿರ್ಲಕ್ಷ್ಯದಿಂದ ಗ್ರಾಹಕರ ವೇದಿಕೆಗೆ ದೂರು ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಮೋಸಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಗ್ರಾಹಕರು ಮೋಸ ಹೋಗುವುದನ್ನು ತಪ್ಪಿಸಲು ಗ್ರಾಹಕರ ರಕ್ಷಣಾ ವೇದಿಕೆಗೆ ದೂರು ನೀ ಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಶೋಭಾ ಪಿ. ಮಾತನಾಡಿ, ಗ್ರಾಹಕರಿಗಾಗಿ ಕೆಲವೊಂದು ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನೀಡಲಾಗಿದೆ. ವಸ್ತುಗಳ ಖರೀದಿಗೆ ಮೊದಲು ವಸ್ತುವಿನ ಅಗತ್ಯತೆ, ಪೂರ್ವಾ ಪರಗಳನ್ನು ತಿಳಿದುಕೊಳ್ಳಬೇಕು. ಆನ್‌ಲೈನ್ ಶಾಪಿಂಗ್‌ನಲ್ಲಿ ನಮ್ಮ ಅಗತ್ಯತೆ ಯನ್ನು ಮರೆತು ವಸ್ತುಗಳಿಗೆ ಮಾರು ಹೋಗುತ್ತಿದ್ದೇವೆ. ವಸ್ತುಗಳ ಖರೀದಿಸುವ ಮುಂಚೆ ದೃಢ ನಿರ್ಧಾರ ಕೈಗೊಳ್ಳುವುದು ಅತೀ ಮುಖ್ಯ ಎಂದರು. ಖರೀದಿಸಿದ ವಸ್ತುವಿನಲ್ಲಿ ದೋಷಗಳಿದ್ದರೆ ಮತ್ತು ಅದಕ್ಕೆ ಸಂಬಂಧಪಟ್ಟ ವ್ಯಾಪಾರಿಗಳು ಸೂಕ್ತವಾಗಿ ಸ್ಪಂದಿಸದೆ ಇದ್ದಲ್ಲಿ, ಗ್ರಾಹಕರ ವೇದಿಕೆಗೆ ಎರಡು ವರ್ಷದೊಳಗೆ ದೂರು ನೀಡಬಹುದಾಗಿದೆ. ದೂರು ನೀಡುವ ಸಂಧರ್ದಲ್ಲಿ ವಸ್ತುಗಳನ್ನು ಖರೀದಿಸಿದ ಬಿಲ್‌ಗಳನ್ನೇ ಮೂಲ ಆಧಾರವಾಗಿ ಪರಿಗಣಿಸ ಲಾಗುತ್ತದೆ ಎಂದು ಅವರು ಹೇಳಿದರು.

ವಳಕಾಡು ಹೈಸ್ಕೂಲ್ ವಿದ್ಯಾರ್ಥಿ ಕೇದಾರ್ ನಾಯಕ್ ತನ್ನ ಅನುಭವ ಹಂಚಿಕೊಂಡರು. ತಾಪಂ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ಉಡುಪಿ ಜಿಲ್ಲಾ ಗ್ರಾಹಕ ವೇದಿಕೆಯ ವಿಶ್ವಸ್ಥ ಎ.ಪಿ.ಕೊಡಂಚ, ಬಳಕೆದಾರರ ವೇದಿಕೆಯ ಸಂಚಾಲಕ ದಾಮೋದರ ಐತಾಳ್, ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಡಿ.ಆರ್.ಚೌಗುಲಾ, ವಳಕಾಡು ಶಾಲಾ ಮುಖ್ಯೋಾಧ್ಯಾಯಿನಿ ನಿರ್ಮಲಾ ಉಪಸ್ಥಿತರಿದ್ದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಬಿ.ಕೆ.ಕುಸುಮಾಧರ ಸ್ವಾಗತಿಸಿದರು. ಜಿಲ್ಲಾ ಗ್ರಾಹಕ ವೇದಿಕೆಯ ವಿಶ್ವಸ್ಥ ಎಚ್. ಶಾಂತರಾಜ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀ ಬಾಯಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಗ್ರಾಹಕ ವೇದಿಕೆಯ ವಿಶ್ವಸ್ಥ ಚಂದ್ರಶೇಖರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News