ಖಶೋಗಿ ಹತ್ಯೆ ಪ್ರಕರಣ: ತೀರ್ಪು ಖಂಡಿಸಿದ ಟರ್ಕಿ, ಮಾನವಹಕ್ಕು ಸಂಘಟನೆಗಳು

Update: 2019-12-24 14:51 GMT
file photo

ವಾಶಿಂಗ್ಟನ್, ಡಿ. 24: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಕೊಲೆ ಪ್ರಕರಣದಲ್ಲಿ ಆ ದೇಶದ ನ್ಯಾಯಾಲಯವು ಐವರಿಗೆ ಮರಣ ದಂಡನೆ ವಿಧಿಸಿರುವುದನ್ನು ಅಮೆರಿಕ ಸೋಮವಾರ ಸ್ವಾಗತಿಸಿದೆ.

‘‘ಈ ಭಯಾನಕ ಅಪರಾಧಕ್ಕೆ ಕಾರಣರಾದವರ ಮೇಲೆ ಉತ್ತರದಾಯಿತ್ವ ನಿಗದಿಪಡಿಸುವ ನಿಟ್ಟಿನಲ್ಲಿ ಇಂದಿನ ತೀರ್ಪು ಪ್ರಮುಖ ಹೆಜ್ಜೆಯಾಗಿದೆ’’ ಎಂದು ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಆದರೆ, ಈ ತೀರ್ಪು ನ್ಯಾಯದ ಅಣಕ ಎಂಬುದಾಗಿ ಟರ್ಕಿ, ಮಾನವಹಕ್ಕು ಗುಂಪುಗಳು ಮತ್ತು ಖಶೋಗಿ ಅಂಕಣಗಳನ್ನು ಬರೆಯುತ್ತಿದ್ದ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆ ಬಣ್ಣಿಸಿವೆ.

ಸೌದಿ ನ್ಯಾಯಾಲಯವು ಐವರಿಗೆ ಮರಣ ದಂಡನೆಗಳನ್ನು ನೀಡಿದೆಯಾದರೂ, ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಇಬ್ಬರು ಆಪ್ತ ಸಹಾಯಕರನ್ನು ದೋಷಮುಕ್ತಗೊಳಿಸಿದೆ.

2018 ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿನ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ನಡೆದ ಖಶೋಗಿ ಹತ್ಯೆಗೆ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಜವಾಬ್ದಾರರಾಗಿದ್ದಾರೆ ಎಂದು ಅಮೆರಿಕದ ಸೆನೆಟ್ ಹೇಳಿತ್ತು.

‘‘ನ್ಯಾಯೋಚಿತ ಹಾಗೂ ಪಾರದರ್ಶಕ ನ್ಯಾಯಾಂಗ ಪ್ರಕ್ರಿಯೆಯನ್ನು ನಡೆಸುವಂತೆ ಅಮೆರಿಕವು ಸೌದಿ ಅರೇಬಿಯವನ್ನು ಉತ್ತೇಜಿಸಿತ್ತು’’ ಎಂದು ಅಧಿಕಾರಿ ಹೇಳಿದರು.

ತೀರ್ಪಿಗೆ ಖಶೋಗಿ ಪುತ್ರ ಸ್ವಾಗತ

ಜಮಾಲ್ ಖಶೋಗಿ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯದ ನ್ಯಾಯಾಲಯವೊಂದು ನೀಡಿದ ತೀರ್ಪನ್ನು ಖಶೋಗಿ ಪುತ್ರ ಸಲಾಹ್ ಸೋಮವಾರ ಸ್ವಾಗತಿಸಿದ್ದಾರೆ ಹಾಗೂ ಸೌದಿ ನ್ಯಾಯಾಂಗದ ಎಲ್ಲ ಹಂತಗಳ ಬಗ್ಗೆ ನನ್ನ ಕುಟುಂಬಕ್ಕೆ ವಿಶ್ವಾಸವಿದೆ ಎಂದಿದ್ದಾರೆ.

‘‘ನ್ಯಾಯಾಂಗದ ನ್ಯಾಯಪರತೆ ಎರಡು ತತ್ವಗಳನ್ನು ಒಳಗೊಂಡಿದೆ- ನ್ಯಾಯ ಮತ್ತು ಕ್ಷಿಪ್ರ ಇತ್ಯರ್ಥ. ಇಲ್ಲಿ ಅನ್ಯಾಯವೂ ಆಗಿಲ್ಲ, ವಿಳಂಬವೂ ಆಗಿಲ್ಲ’’ ಎಂಬುದಾಗಿ ಸಲಾಹ್ ಅರೇಬಿಕ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

‘‘ಇಂದು ನ್ಯಾಯಾಂಗವು ಜಮಾಲ್ ಖಶೋಗಿ ಮಕ್ಕಳಾದ ನಮಗೆ ನ್ಯಾಯ ನೀಡಿದೆ. ಸೌದಿ ನ್ಯಾಯಾಂಗ ವ್ಯವಸ್ಥೆಯ ಎಲ್ಲ ಹಂತಗಳ ಮೇಲೆ ನಾವು ಇಟ್ಟಿರುವ ವಿಶ್ವಾಸವನ್ನು ನಾವು ಇಂದು ಮತ್ತೊಮ್ಮೆ ದೃಢೀಕರಿಸುತ್ತೇವೆ. ದೇವರಿಗೆ ಧನ್ಯವಾದಗಳು’’ ಎಂದು ತನ್ನ ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News