×
Ad

ಕೇರಳ ವಿದ್ಯಾರ್ಥಿಗಳ ಮೇಲೆ ಪ್ರತ್ಯೇಕ ನಿಗಾಕ್ಕೆ ಸಲಹೆ: ಅಸಮಾಧಾನ

Update: 2019-12-24 20:37 IST

ಮಂಗಳೂರು, ಡಿ.24: ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿನ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ನಿಷೇಧಾಜ್ಞೆ ಉಲ್ಲಂಘಿಸದಂತೆ ಕ್ರಮ ಕೈಗೊಳ್ಳುವಂತೆ ಸೂಚನೆಯ ಜತೆಗೆ ಕೇರಳ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿರುವ ಕಾಲೇಜುಗಳಲ್ಲಿ ಅಂತಹ ವಿದ್ಯಾರ್ಥಿಗಳ ಮೇಲೆ ಪ್ರತ್ಯೇಕ ನಿಗಾ ವಹಿಸಲು ಸುತ್ತೋಲೆಯನ್ನು ನೀಡಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ನಿಷೇಧಾಜ್ಞೆ ಉಲ್ಲಂಘಿಸದಂತೆ ಕ್ರಮ ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು (ಪದವಿ ವಿಭಾಗ) ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆಯೊಂದನ್ನು ರವಾನಿಸಿದ್ದರು. ಜಿಲ್ಲಾಧಿಕಾರಿಗಳ ಈಮೇಲ್ ಸೂಚನೆ ಮೇರೆಗೆ ಈ ಸೂಚನೆಯನ್ನು ನೀಡುತ್ತಿರುವುದಾಗಿ ಉಲ್ಲೇಖಿಸಲಾಗಿರುವ ಈ ಸುತ್ತೋಲೆಯನ್ನು ಡಿ. 19ರಂದು ರವಾನಿಸಲಾಗಿದೆ.

ವಿದ್ಯಾರ್ಥಿಗಳು ನಿಷೇಧಾಜ್ಞೆಯನ್ನು ಉಲ್ಲಂಘಿಸದಂತೆ ಕ್ರಮ ಕೈಗೊಳ್ಳುವ ಸೂಚನೆಯ ಜತೆಗೆ, ಪ್ರತ್ಯೇಕವಾಗಿ ಕೇರಳ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿರುವ ಕಾಲೇಜುಗಳಲ್ಲಿ ಸದರಿ ವಿದ್ಯಾರ್ಥಿಗಳ ಬಗ್ಗೆ ಪ್ರತ್ಯೇಕ ನಿಗಾ ವಹಿಸಲು ತಿಳಿಸಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯ, ಭಾಷೆ ಆಧಾರದಲ್ಲಿ ಎತ್ತಿಕಟ್ಟುವುದು ದುರದೃಷ್ಟಕರ

ಮಂಗಳೂರಿಗೆ ಇಂದು ಭೇಟಿ ನೀಡಿದ್ದ ಸಿಪಿಎಂನ ರಾಜ್ಯ ಕಾರ್ಯದರ್ಶಿ ವರಲಕ್ಷ್ಮಿಯವರು ಸುದ್ದಿಗೋಷ್ಠಿಯಲ್ಲಿ ಈ ಸುತ್ತೋಲೆಯನ್ನು ಉಲ್ಲೇಖಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪದವಿ ಇಲಾಖೆಯ ಜಂಟಿ ನಿರ್ದೇಶಕರು ಕಾಲೇಜಿನ ಪ್ರಾಂಶುಪಾಲರಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಸೆಕ್ಷನ್ ಇರುವ ಸಂದರ್ಭ ವಿದ್ಯಾರ್ಥಿಗಳು ಬೀದಿಗಿಳಿದು ನಿಷೇಧಾಜ್ಞೆ ಉಲ್ಲಂಘಿಸದಂತೆ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸ ಲಾಗಿದೆ. ಅದೇನೋ ಸರಿ. ಆದರೆ, ಕೇರಳ ರಾಜ್ಯದ ವಿದ್ಯಾರ್ಥಿಗಳ ಮೇಲೆ ಪ್ರತ್ಯೇಕ ನಿಗಾ ಇರಿಸುವಂತೆ ಸೂಚಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ರಾಜ್ಯ, ಭಾಷೆ ಆಧಾರದಲ್ಲಿ ಎತ್ತಿಕಟ್ಟುವ ಕೆಲಸವನ್ನು ಸರಕಾರ ಅಥವಾ ಪ್ರಭುತ್ವ ಮಾಡಬಾರದು ಎಂದು ವರಲಕ್ಷ್ಮಿ ಹೇಳಿದರು.

ಗೋಷ್ಠಿಯಲ್ಲಿದ್ದ ಕೇರಳದ ಸಂಸದರು ಹಾಗೂ ಶಾಸಕರು, ಮಾಜಿ ಶಾಸಕರು ಕೂಡಾ ಈ ಬಗ್ಗೆ ಆಕ್ಷೇಪಿಸಿದರು. ಕರುಣಾಕರನ್ ಪ್ರತಿಕ್ರಿಯಿಸಿ, ಕೇರಳ ಮತ್ತು ಕರ್ನಾಟಕದ ಸೌಹಾರ್ದ ಸಂಬಂಧ ಹಿಂದಿನಿಂದಲೂ ಬೆಳೆದು ಬಂದಿದೆ. ಶಿಕ್ಷಣ ಮಾತ್ರವಲ್ಲದೆ, ವೈದ್ಯಕೀಯ ಸೇವೆ ಹಾಗೂ ಉದ್ಯೋಗ ನಿಮಿತ್ತವೂ ಕರ್ನಾಟಕಕ್ಕೆ ಸಾವಿರಾರು ಜನರು ಬರುತ್ತಾರೆ. ನಾವು ಪ್ರಜಾಪ್ರಭುತ್ವದ ಜಾತ್ಯತೀತ ವ್ಯವಸ್ಥೆಯಲ್ಲಿ ಬದುಕುತ್ತಿರುವುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಈ ಸುತ್ತೋಲೆಯ ಕುರಿತಂತೆ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರನ್ನು ವಿಚಾರಿಸಿದಾಗ, ಜಿಲ್ಲಾಧಿಕಾರಿ ಕಚೇರಿಯಿಂದ ವಾಟ್ಸಾಪ್ ಮೂಲಕ ಬಂದ ಈ ಸುತ್ತೋಲೆಯನ್ನು ಕಾಲೇಜುಗಳಿಗೆ ಕಳುಹಿಸಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News