×
Ad

ಮಂಗಳೂರು ಹಿಂಸಾಚಾರಕ್ಕೆ ಜಾತಿ-ಧರ್ಮದ ಲೇಪ ಬೇಡ: ಮೊಯ್ದಿನ್ ಬಾವ

Update: 2019-12-24 20:42 IST

ಮಂಗಳೂರು, ಡಿ.24: ಮಂಗಳೂರಿನಲ್ಲಿ ಪೊಲೀಸರ ಅತಿರೇಕದಿಂದ ಗುರುವಾರ ನಡೆದ ಹಿಂಸಾಚಾರಕ್ಕೆ ಜಾತಿ-ಧರ್ಮದ ಲೇಪ ಬೇಡ ಎಂದು ಮಾಜಿ ಶಾಸಕ ಮೊಯ್ದಿನ್ ಬಾವ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಅದರ ಭಾಗವಾಗಿ ಮಂಗಳೂರಿನಲ್ಲೂ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ಮುಂದಾಗಿದ್ದವು. ಅದನ್ನು ಹತ್ತಿಕ್ಕಲೆಂದೇ ಪೊಲೀಸರು ಅನುಮತಿ ನಿರಾಕರಿಸುತ್ತಿದ್ದರು. ಡಿ.19ರಂದು ಸಂಘಟನೆಯೊಂದು ಪ್ರತಿಭಟನೆ ನಡೆಸಲು ಅನುಮತಿ ಪಡೆದುಕೊಂಡರೂ ಬಳಿಕ ಪೊಲೀಸ್ ಇಲಾಖೆಯು ಸೆ.144 ವಿಧಿಸಿ ಅನುಮತಿ ನಿರಾಕರಿಸಿತು. ಈ ಬಗ್ಗೆ ಮಾಹಿತಿ ತಿಳಿಯದ ಜನರು ಡಿಸಿ ಕಚೇರಿ ಮುಂದೆ ಜಮಾಯಿಸಿದ್ದರು. ಅವರನ್ನು ತಿಳಿಹೇಳಿ ವಾಪಸ್ ಕಳುಹಿಸುವ ಅವಕಾಶವಿದ್ದರೂ ಪೊಲೀಸರು ಅದನ್ನು ಮಾಡದೆ ಹಿಂಸಾಚಾರಕ್ಕೆ ಕಾರಣರಾದರು. ಪೌರತ್ವ ತಿದ್ದುಪಡಿ ಕಾಯ್ದೆಯು ಕೇವಲ ಮುಸ್ಲಿಮರಿಗೆ ಸೀಮಿತವಾದುದಲ್ಲ. ಅದು ಎಲ್ಲರಿಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಇದನ್ನು ಒಂದು ಸಮುದಾಯಕ್ಕೆ ಸೀಮಿತವಾದುದು ಎಂದು ಬಿಂಬಿಸುವ ಅಗತ್ಯವಿಲ್ಲ ಎಂದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಕಳೆದ ಆರು ತಿಂಗಳಿನಿಂದೀಚೆಗೆ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ತ್ರಿವಳಿ ತಲಾಖ್, ಬಾಬರಿ ಮಸ್ಜಿದ್ ಮತ್ತಿತರ ವಿಷಯದಲ್ಲಿ ಅನೇಕ ಕಾಯ್ದೆಗಳನ್ನು ಜಾರಿಗೊಳಿಸಿತ್ತು. ಅದನ್ನೆಲ್ಲಾ ಮೌನವಾಗಿ ಆಲಿಸಿದ ಮುಸ್ಲಿಮರು ಎನ್‌ಆರ್‌ಸಿ ವಿರುದ್ಧ ಗಟ್ಟಿಧ್ವನಿಯಲ್ಲಿ ಮಾತನಾಡತೊಡಗಿದ್ದಾರೆ. ಇದು ಅತ್ಯಂತ ತಾರತಮ್ಯದಿಂದ ಕೂಡಿದ ಕಾಯ್ದೆಯಾಗಿದೆ. ಇದನ್ನು ಎಲ್ಲಾ ಜಾತಿ, ಸಮುದಾಯದವರೂ ಖಂಡಿಸಬೇಕಿದೆ ಎಂದರು.

ಮೊನ್ನೆ ಖಾಸಗಿ ಆಸ್ಪತ್ರೆಗೆ ನುಗ್ಗಿದ ಪೊಲೀಸರು ಅಶ್ರುವಾಯಿ ಸಿಡಿಸಿದಾಗ ನಾನು ಕೂಡಾ ಐಸಿಯುನಲ್ಲಿ ಗಾಯಾಳುಗಳ ಆರೈಕೆಯಲ್ಲಿ ತೊಡಗಿದ್ದೆ. ಪೊಲೀಸರ ಆರ್ಭಟದಿಂದ ನಾನೂ ಕೂಡ ಹೆದರಿದ್ದೆ. ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರು ಇದೀಗ ಮಾನಸಿಕವಾಗಿ ಜರ್ಜರಿತಗೊಂಡು ‘ಪೊಲೀಸ್.... ಪೊಲೀಸ್...’ ಎಂದು ಬೊಬ್ಬಿಡುತ್ತಿದ್ದಾರೆ. ಪೊಲೀಸರ ಕ್ರೌರ್ಯಕ್ಕೆ ಇದೊಂದು ಸಾಕ್ಷಿಯಾಗಿದೆ ಎಂದು ಮೊಯ್ದಿನ್ ಬಾವಾ ನುಡಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯ ಶಾಹುಲ್ ಹಮೀದ್ ಕೆ.ಕೆ., ಮುಸ್ಲಿಂ ಸೆಂಟ್ರಲ್ ಕಮಿಟಿಯ ಮುಸ್ತಫಾ ಸಿಎಂ., ಆಸಿಫ್ ಬಂದರ್, ಹಾರಿಸ್ ಬೈಕಂಪಾಡಿ, ಜಲೀಲ್ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News