×
Ad

ಬತ್ತಿಹೋಗಿರುವ ಕೊಳವೆ ಬಾವಿಗಳ ಪುನಶ್ಚೇತನ: ಶಾಸಕ ರಾಜೇಶ್ ನಾಯ್ಕ್

Update: 2019-12-24 20:48 IST

ಬಂಟ್ವಾಳ, ಡಿ. 24: ಅನಗತ್ಯವಾಗಿ ಕೊಳವೆ ಬಾವಿ ತೊಡಿಸಿ, ಭೂಮಿಯನ್ನು ಮತ್ತಷ್ಟು ಬತ್ತಿಹೋಗಲು ಅನುಮತಿ ಕೊಡುವುದಿಲ್ಲ. ತಾಲೂಕಿನಲ್ಲಿ ಬತ್ತಿಹೋಗಿರುವ ಕೊಳವೆ ಬಾವಿಗಳನ್ನು ಪುನಶ್ಚೇತನ ಮಾಡುವ ಮೂಲಕ ಮರುಜೀವ ನೀಡುವ ಕಾರ್ಯ ಆಗಬೇಕಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.

ಬಂಟ್ವಾಳ ತಾಲೂಕು ಪಂಚಾಯತ್ ಎಸ್‍ಜಿಎಸ್‍ವೈ ಸಭಾಭವನದಲ್ಲಿ ಮಂಗಳವಾರ ಸಂಗಬೆಟ್ಟು, ಕರೋಪಾಡಿ ಮತ್ತು ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಗತಿಯ ಕುರಿತು ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಹಾಗೂ ಸಂಬಂಧಪಟ್ಟ ಎಂಜಿನಿಯರ್‍ಗಳ ಜೊತೆ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಬಂಟ್ವಾಳ ತಾಲೂಕಿನಾದ್ಯಂತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಿ, ಎಲ್ಲರಿಗೂ ನಿರಂತರ ನೀರೊದಗಿಸುವ ಕಾರ್ಯ ನಡೆಸುವ ಕಡೆಗೆ ಆದ್ಯತೆ ದೊರಕಿಸುವ ಪ್ರಯತ್ನ ಮಾಡಬೇಕು. ನಳ್ಳಿಯಲ್ಲಿ ಕುಡಿಯುವ ನೀರು ಬಾರದೇ ಇದ್ದರೆ ಯೋಜನೆ ಇದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಸರಕಾರದ ಕೋಟ್ಯಂತರ ರೂ ವೆಚ್ಚದ ಯೋಜನೆ ರೂಪಿಸಿದ ಬಳಿಕ ಅದು ಸರಿಯಾಗಿ ತಲುಪುವಂತೆ ನೋಡಿಕೊಳ್ಳಬೇಕು. ಇದು ನಿಷ್ಫಲವಾಗಲು ಬಿಡಬಾರದು. ಯಾವ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಲಭ್ಯವಾಗುತ್ತಿಲ್ಲವೋ ಅವುಗಳ ಕುರಿತು ಗಮನಹರಿಸಬೇಕು, ಪ್ರತಿ ದಿನವೂ ನೀರು ಸರಬರಾಜಾಗಬೇಕು. ನಿಯಮಿತವಾಗಿ ಸಮನ್ವಯ ಸಮಿತಿ ಸಭೆ ನಡೆದು, ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಬೇಕು ಎಂದು ಶಾಸಕರು ಸಲಹೆ ನೀಡಿದರು.

ಸೌರಶಕ್ತಿ ಹೆಚ್ಚಿನ ಆದ್ಯತೆ

ಗ್ರಾಮ ಪಂಚಾಯತ್‍ಗಳು ಸ್ವಾವಲಂಬಿಯಾಗಬೇಕಾದರೆ ಸೌರಶಕ್ತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ ಗ್ರಿಡ್‍ಗೆ ಕರೆಂಟ್ ನೀಡುವುದರ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಸಾಧ್ಯ. ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾರದಂತೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದ ಶಾಸಕರು, ಕೂಡಲೇ ಕಾರ್ಯೋನ್ಮುಖವಾಗುವಂತೆ ಇಒ ರಾಜಣ್ಣ ಅವರಿಗೆ ಸೂಚಿಸಿದರು.

ಹೊರಗುಳಿದ ಗ್ರಾಮಗಳಿಗೆ ನೀರು ಪೂರೈಕೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಹೊರಗುಳಿದ ಗ್ರಾಮಗಳಿಗೆ ಆದ್ಯತೆ ಮೇರೆ ಕುಡಿಯುವ ನೀರೊದಗಿಸಿ, ಕರ್ಪೆ ಗ್ರಾಮದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗುತ್ತಿದ್ದು, ಅಮ್ಟಾಡಿ ಭಾಗದ ಜನರಿಗೆ ನೀರಿನ ಕೊರತೆಯಾಗದು. ಬತ್ತಿಹೋದ ಕೊಳವೆ ಬಾವಿಗಳ ಪುನಶ್ಚೇತನ ಮಾಡುವುದರ ಮೂಲಕ ಕೊಳವೆ ಬಾವಿಗಳಿಗೆ ಮರುಜೀವ ನೀಡಿ ಎಂದು ಸಲಹೆ ನೀಡಿದ ಶಾಸಕರು, ಅನುದಾನ ಕೊರತೆಯಾದರೆ ಒದಗಿಸುವ ಭರವಸೆ ನೀಡಿದರು.

ಮುಂದಾಲೋಚನೆ ಯೋಜನೆಗಳನ್ನು ಸಿದ್ಧಪಡಿಸಿ

ಬಂಟ್ವಾಳ ಕ್ಷೇತ್ರದಲ್ಲಿ ನೀರಿಗೆ ಸಾಕಷ್ಟು ಮೂಲಗಳಿದ್ದು, ವ್ಯವಸ್ಥಿತವಾದ ಯೋಜನೆಗಳು ಅನುಷ್ಠಾನಗೊಳ್ಳಬೇಕಾಗಿದೆ. ಯೋಜನಾ ರೂಪುರೇಷೆಗಳನ್ನು ಸಿದ್ದಪಡಿಸುವಾಗ ಮುಂದಾಲೋಚನೆ ಇರಲಿ ಎಂದು ಇಲಾಖಾ ವಿವಿಧ ಯೋಜನಾಧಿಕಾರಿಗಳಿಗೆ ಸೂಚಿಸಿದ ಶಾಸಕರು, ಬಂಟ್ವಾಳ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿನ  ಸಮಸ್ಯೆ ಗೆ ಸಂಬಂಧಿಸಿದಂತೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳ ಸಭೆ ನಡೆಸುವಂತೆ ಹಾಗೂ ಇದರಲ್ಲಾದ ಬೆಳವಣಿಗೆಗಳ ಬಗ್ಗೆ ವರದಿ ನೀಡುವಂತೆ ಅವರು ಸೂಚಿಸಿದರು.

ಮಳೆಕೊಯ್ಲು ಮಾಹಿತಿ ಕಾರ್ಯಾಗಾರ

ಪರಿಸ್ಥಿತಿಗೆ ಹೊಂದಿಕೊಂಡು ನೀರಿನ ಮಿತ ಬಳಕೆಯಾಗಬೇಕಾಗಿದೆ. ಪ್ರತಿಯೊಬ್ಬರು ಮಳೆನೀರು ಕೊಯ್ಲು ಅಳವಡಿಸಬೇಕಾಗಿದ್ದು, ನುರಿತ ತಜ್ಞರಿಂದ ಮಳೆಕೊಯ್ಲು ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಲಾಗುವುದು ಎಂದು ಶಾಸಕರು ಸಭೆಗೆ ತಿಳಿಸಿದರು.

ಕನಿಷ್ಟ ಮೂರು ತಿಂಗಳಿಗೊಮ್ಮೆಯಾದರೂ ನೀರಿನ ಕುರಿತು ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಬೇಕು ಎಂದು ಗ್ರಾಪಂ ಅಧ್ಯಕ್ಷರು ಶಾಸಕರಲ್ಲಿ ಮನವಿ ಮಾಡಿದರು. ಹೆಚ್ಚಿನ ಗ್ರಾಮ ಪಂಚಾಯತ್‍ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿದ್ದು, ವಿದ್ಯುತ್ ಸಮಸ್ಯೆಯಿಂದ ನೀರು ಸರಬರಾಜಾಗುತ್ತಿಲ್ಲ ಎಂದು ಗ್ರಾಪಂ ಅಧ್ಯಕ್ಷರು ಶಾಸಕರ ಗಮನಕ್ಕೆ ತಂದರು.

ಪಂಜಿಕಲ್ಲು, ಅಮ್ಟಾಡಿ ಸಹಿತ ಅನೇಕ ಗ್ರಾಮದಲ್ಲಿ ಮೆಸ್ಕಾಂ ಇಲಾಖೆಯ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕಡಿಮೆ ಸಾಮಥ್ರ್ಯದ ಟಿಸಿ ಹಾಗೂ ವಿದ್ಯುತ್ ಕಡಿತದಿಂದ ಕುಡಿಯುವ ನೀರು ಸರಬರಾಜು ಮಾಡಲು ಅಸಾಧ್ಯವಾಗುತ್ತಿದೆ ಎಂದು ಅಮ್ಟಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಆರೋಪಿಸಿದರೆ, ಚೆನ್ನೈ ತ್ತೋಡಿ ಗ್ರಾಪಂ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಹತ್ತು ಟ್ಯಾಂಕ್‍ಗಳಿದ್ದು, ಈ ಪೈಕಿ 6 ಟ್ಯಾಂಕ್‍ಗಳಿಗೆ ಮಾತ್ರ ನೀರು ಸರಬರಾಜು ಆಗುತ್ತಿದ್ದು, ಉಳಿದ ನಾಲ್ಕು ಟ್ಯಾಂಕ್‍ಗಳಿಗೆ ನೀರು ತಲುಪುತ್ತಿಲ್ಲ. ಇದರಿಂದ ಕುಂಟಾಲಪಲ್ಕೆ ಸಹಿತ ವಿವಿಧ ಪ್ರದೇಶಗಳಿಗೆ ನೀರಿನ ಸಮಸ್ಯೆ ತಲೆದೋರಿದೆ ಎಂದು ಗ್ರಾಪಂ ಅಧ್ಯಕ್ಷ ಯತೀಶ್ ಎಂ.ಶೆಟ್ಟಿ ದೂರಿಕೊಂಡರು.

ಕನ್ಯಾನದಲ್ಲಿ ಅನೇಕ ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಕುಡಿಯುವ ನೀರಿ ಗಾಗಿ ಖಾಸಗಿ ಬೋರ್‍ವೆಲ್‍ನ ಬಳಕೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯಿತು.

ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಅಮ್ಟಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ವಿಟ್ಲ ಪಡ್ನೂರು ಗ್ರಾಪಂ ಅಧ್ಯಕ್ಷ ರವೀಶ್ ಶೆಟ್ಟಿ, ಚೆನ್ನೈತೋಡಿ ಗ್ರಾಪಂ ಅಧ್ಯಕ್ಷ ಯತೀಶ್ ಶೆಟ್ಟಿ, ಅನಂತಾಡಿ ಗ್ರಾಪಂ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಪಂಜಿಕಲ್ಲು ಗ್ರಾಪಂ ಅಧ್ಯಕ್ಷೆ ಸುಮಿತ್ರಾ, ಕುಕ್ಕಿಪ್ಪಾಡಿ ಗ್ರಾಪಂ ಅಧ್ಯಕ್ಷ ದಿನೇಶ್ ಸುಂದರ ಶಾಂತಿ ಮೊದಲಾದವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ವೇಳೆ ತಮ್ಮ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.

ಮೆಸ್ಕಾಂ ಎಇಇ ಪ್ರಶಾಂತ್ ಪೈ, ಪಂಚಾಯತ್ರಾಜ್ ಇಲಾಖೆಯ ಇಂಜಿನಿಯರ್‍ಗಳಾದ ಜಗದೀಶ್ ನಿಂಬಾಳ್ಕರ್, ಅಜಿತ್, ಅಮರ್ ಇನ್ಫ್ರಾದ ಸಲಹೆಗಾರ, ಕೆಯುಡಬ್ಲ್ಯುಎಸ್‍ನ ನಿವೃತ್ತ ಎಇಇ ಶೀನ ಮೂಲ್ಯ ಸಭೆಯಲ್ಲಿ ಪೂರಕ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News