ಮುಸ್ಲಿಮರಿಗೆ 150 ದೇಶಗಳಿವೆ,ಹಿಂದೂಗಳಿಗೆ ಇರುವುದು ಭಾರತ ಮಾತ್ರ:ಗುಜರಾತ್ ಸಿಎಂ

Update: 2019-12-25 17:06 GMT

ಅಹ್ಮದಾಬಾದ್,ಡಿ.25: ಮುಸ್ಲಿಮರು 150 ಇಸ್ಲಾಮಿಕ್ ದೇಶಗಳ ಪೈಕಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳ ಬಹುದು,ಆದರೆ ಹಿಂದೂಗಳಿಗೆ ಇರುವುದು ಭಾರತವೊಂದೇ ಎಂದು ಹೇಳುವ ಮೂಲಕ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಪೌರತ್ವ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಂಗಳವಾರ ಸಾಬರಮತಿ ಆಶ್ರಮದ ಹೊರಗೆ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ಬೆಂಬಲಿಸಿ ನಡೆದ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು ನೂತನ ಕಾಯ್ದೆಯನ್ನು ವಿರೋಧಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು. ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಶೇ.22ರಷ್ಟು ಹಿಂದುಗಳಿದ್ದರು. ಈಗ ಧಾರ್ಮಿಕ ಕಿರುಕುಳ,ಅತ್ಯಾಚಾರಗಳು ಮತ್ತು ನಿರಂತರ ಹಿಂಸೆಯಿಂದಾಗಿ ಅವರ ಸಂಖ್ಯೆ ಕೇವಲ ಶೇ.3ಕ್ಕಿಳಿದಿದೆ. ಇದೇ ಕಾರಣದಿಂದ ಅಲ್ಲಿಯ ಹಿಂದುಗಳು ಭಾರತಕ್ಕೆ ಮರಳಲು ಬಯಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಈ ಹಿಂದುಗಳಿಗೆ ಕಾಂಗ್ರೆಸ್ ನೆರವಾಗಬೇಕಿತ್ತು. ಈಗ ನಾವು ಆ ಕೆಲಸವನ್ನು ಮಾಡುತ್ತಿರುವಾಗ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ ಎಂದರು.

ಬಾಂಗ್ಲಾದೇಶದಲ್ಲಿ ಹಿಂದುಗಳ ಜನಸಂಖ್ಯೆ ಕೇವಲ ಶೇ.2ಕ್ಕೆ ಕುಸಿದಿದ್ದರೆ,ಅಫಘಾನಿಸ್ತಾನದಲ್ಲಿ ಎರಡು ಲಕ್ಷದಷ್ಟಿದ್ದ ಹಿಂದುಗಳು ಮತ್ತು ಸಿಕ್ಖರ ಸಂಖ್ಯೆ ಇಂದು 500ಕ್ಕೆ ಇಳಿದಿದೆ ಎಂದ ರೂಪಾನಿ,ಮುಸ್ಲಿಮರಿಗಾದರೋ ಹೋಗಲು 150 ದೇಶಗಳಿವೆ,ಆದರೆ ಹಿಂದುಗಳಿಗ ಇರುವುದು ಒಂದೇ ದೇಶ ಮತ್ತು ಅದು ಭಾರತ. ಹೀಗಾಗಿ ಅವರು ಮರಳಲು ಬಯಸಿದರೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.9ರಿಂದ ಶೇ.14ಕ್ಕೆ ಹೆಚ್ಚಿರುವುದನ್ನು ಬೆಟ್ಟುಮಾಡಿದ ಅವರು,ಜಾತ್ಯತೀತ ಸಂವಿಧಾನದಿಂದಾಗಿ ಮುಸ್ಲಿಮರು ಭಾರತದಲ್ಲಿ ಘನತೆಯ ಬದುಕು ನಡೆಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಸಿಎಎ ಅನ್ನು ವಿರೋಧಿಸುತ್ತಿರುವುದಕ್ಕಾಗಿ ದಲಿತ ನಾಯಕರನ್ನು ಮತ್ತು ಸಂಘಟನೆಗಳನ್ನೂ ರೂಪಾನಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News