×
Ad

ದೇವರ ಪ್ರೀತಿಯಿಂದ ನಿಮ್ಮನ್ನು ವಂಚಿತರಾಗಿಸಬೇಡಿ: ಪೋಪ್ ಫ್ರಾನ್ಸಿಸ್

Update: 2019-12-25 23:29 IST

ವ್ಯಾಟಿಕನ್ ಸಿಟಿ, ಡಿ. 25: ಚರ್ಚ್‌ನ ವೈಫಲ್ಯಗಳು ದೇವರ ಪ್ರೀತಿಯನ್ನು ಪಡೆಯುವುದರಿಂದ ನಿಮ್ಮನ್ನು ತಡೆಯದಂತೆ ನೋಡಿಕೊಳ್ಳಿ ಎಂದು ಪೋಪ್ ಫ್ರಾನ್ಸಿಸ್ ಜಗತ್ತಿನ 130 ಕೋಟಿ ರೋಮನ್ ಕ್ಯಾಥೊಲಿಕರಿಗೆ ಮಂಗಳವಾರ ಕರೆ ನೀಡಿದ್ದಾರೆ.

ಅವರು ಮಂಗಳವಾರ ರಾತ್ರಿ ಸೇಂಟ್ ಪೀಟರ್ಸ್ ಬ್ಯಾಸಿಲಿಕದಲ್ಲಿ ನಡೆದ ಕ್ರಿಸ್ಮಸ್ ಮುನ್ನಾ ದಿನದ ಬೃಹತ್ ಪ್ರಾರ್ಥನಾ ಸಭೆಯಲ್ಲಿ ನೆರೆದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಬೆತ್ಲಹೇಮ್‌ನಲ್ಲಿ ಯೇಸು ಜನಿಸಿದ ರಾತ್ರಿಯ ಆಧ್ಯಾತ್ಮಿಕ ಮತ್ತು ವೈಯಕ್ತಿಕ ಮಹತ್ವಗಳ ಬಗ್ಗೆ 83 ವರ್ಷದ ಪೋಪ್ ಫ್ರಾನ್ಸಿಸ್ ಜನರಿಗೆ ಉಪದೇಶ ನೀಡಿದರು.

‘‘ನಮ್ಮಲ್ಲಿರುವ ಅತ್ಯಂತ ಕೆಟ್ಟವರೂ ಸೇರಿದಂತೆ ನಮ್ಮೆಲ್ಲರನ್ನು ಪ್ರೀತಿಸುವುದನ್ನು ದೇವರು ಮುಂದುವರಿಸುತ್ತಾರೆ ಎನ್ನುವುದನ್ನು ಕ್ರಿಸ್ಮಸ್ ನೆನಪಿಸುತ್ತದೆ’’ ಎಂದು ತನ್ನ ಪೋಪ್ ಆದ ಬಳಿಕ ತಾನು ಆಚರಿಸುತ್ತಿರುವ ಏಳನೇ ಕ್ರಿಸ್ಮಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ ಅವರು ಹೇಳಿದರು.

 ‘‘ನಿಮ್ಮಲ್ಲಿ ತಪ್ಪು ಕಲ್ಪನೆಗಳಿರಬಹುದು, ನೀವು ಪರಿಸ್ಥಿತಿಯನ್ನು ಸಂಪೂರ್ಣ ಹದಗೆಡಿಸಿರಬಹುದು, ಆದರೆ, ದೇವರು ನಿಮ್ಮನ್ನು ಪ್ರೀತಿಸುವುದನ್ನು ಮುಂದುವರಿಸುತ್ತಾರೆ. ನಾವು ಒಳ್ಳೆಯವರಾದರೆ ದೇವರು ನಮಗೆ ಒಳ್ಳೆಯವರಾಗಿರುತ್ತಾರೆ, ನಾವು ಕೆಟ್ಟದು ಮಾಡಿದರೆ ದೇವರು ನಮ್ಮನ್ನು ಶಿಕ್ಷಿಸುತ್ತ್ತಾರೆ ಎಂದು ಜನರು ಎಷ್ಟು ಸಲ ಹೇಳುವುದಿಲ್ಲ. ಆದರೆ, ದೇವರು ಹೀಗಿಲ್ಲ’’ ಎಂದು ಪೋಪ್ ನುಡಿದರು.

ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಹಣಕಾಸು ಅವ್ಯವಹಾರ ಸೇರಿದಂತೆ ಜಗತ್ತಿನಾದ್ಯಂತ ಚರ್ಚ್‌ನಲ್ಲಿ ನಡೆಯುತ್ತಿದೆಯೆನ್ನಲಾದ ಅಹಿತಕರ ಘಟನೆಗಳ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಪೋಪ್, ‘‘ನಾವು ಬಾಲ ಯೇಸುವಿನ ಬಗ್ಗೆ ಯೋಚಿಸೋಣ ಮತ್ತು ಅವರ ಪ್ರೀತಿಯಲ್ಲಿ ಸಿಲುಕೋಣ. ಆಗ ದೇವರ ಪ್ರೀತಿಯನ್ನು ಕಳೆದುಕೊಳ್ಳಲು ನಮಗೆ ಯಾವುದೇ ಕಾರಣವೂ ಇರುವುದಿಲ್ಲ’’ ಎಂದು ಫ್ರಾನ್ಸಿಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News