×
Ad

‘ಕೋಮುವಾದಿ ಕಾನೂನಿಗೆ ನನ್ನ ವಿರೋಧ’: ಪದವಿ ಪ್ರಮಾಣ ಪತ್ರ ನಿರಾಕರಿಸಿದ ಬನಾರಸ್ ಹಿಂದೂ ವಿವಿ ವಿದ್ಯಾರ್ಥಿ

Update: 2019-12-25 23:39 IST

ಹೊಸದಿಲ್ಲಿ, ಡಿ.25: ಪೌರತ್ವ ಕಾಯ್ದೆಯನ್ನು ವಿರೋಧಿಸಿರುವ ಬನಾರಸ್ ಹಿಂದು ವಿವಿ (ಬಿಎಚ್‌ಯು) ವಿದ್ಯಾರ್ಥಿಯೊಬ್ಬ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸಲು ನಿರಾಕರಿಸಿದ ಘಟನೆ ವರದಿಯಾಗಿದೆ.

ಸ್ನಾತಕೋತ್ತರ ವಿದ್ಯಾರ್ಥಿ ರಜತ್ ಸಿಂಗ್ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ಪಡೆಯಲು ನಿರಾಕರಿಸಿದ್ದು, ಕೋಮುವಾದಿ ಕಾನೂನಿಗೆ ತನ್ನ ವಿರೋಧವಿದೆ. ದೇಶವನ್ನು ವಿಭಜಿಸುವ ಯಾವುದೇ ಕಾಯ್ದೆಗೆ ತನ್ನ ವಿರೋಧವಿದೆ. ಜೊತೆಗೆ, ಕಾಯ್ದೆಯನ್ನು ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಬಂಧಿಸಿರುವುದನ್ನೂ ವಿರೋಧಿಸಿ ಹೀಗೆ ಮಾಡಿರುವುದಾಗಿ ಸಿಂಗ್ ಹೇಳಿದ್ದಾರೆ.

ಬಂಧನದಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ವಿವಿ ಆಡಳಿತ ನಿರ್ಲಕ್ಷ್ಯ ವಹಿಸಿದ್ದು ಇವರಲ್ಲಿ ಕೆಲವರು ತನ್ನೊಂದಿಗೆ ಪದವಿ ಪ್ರಮಾಣಪತ್ರ ಪಡೆಯಬೇಕಿತ್ತು. ಆದ್ದರಿಂದಲೇ ತಾನು ಪದವಿ ಪ್ರಮಾಣಪತ್ರ ಪಡೆಯಲು ನಿರಾಕರಿಸಿದ್ದೇನೆ ಎಂದಿದ್ದಾರೆ.

 ಕೋಲ್ಕತಾದ ಜಾದವಪುರ ವಿವಿಯಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ದೇಬ್‌ಸ್ಮಿತಾ ಚೌಧರಿ ವೇದಿಕೆಯಲ್ಲಿ ಪೌರತ್ವ ಕಾಯ್ದೆಯ ಪ್ರತಿಯನ್ನು ಹರಿದು ಹಾಕಿದ ಘಟನೆ ನಡೆದಿದೆ. ಬಳಿಕ ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗಿ ವೇದಿಕೆಯಿಂದ ನಿರ್ಗಮಿಸಿದರು. ಇದೇ ರೀತಿ ಪಾಂಡಿಚೇರಿ ವಿವಿಯ ವಿದ್ಯಾರ್ಥಿನಿ ರಬೀಹಾ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಚಿನ್ನದ ಪದಕವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಹೀಗೆ ಮಾಡಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News