×
Ad

ಭಾರತ-ಶ್ರೀಲಂಕಾ ಟ್ವೆಂಟಿ-20 ಪಂದ್ಯಕ್ಕೆ ಅಸ್ಸಾಂ ಸಿದ್ಧ

Update: 2019-12-26 11:23 IST

ಮುಂಬೈ, ಡಿ.25: ಅಸ್ಸಾಂ ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತಿದ್ದು, ಗುವಾಹಟಿಯಲ್ಲಿ ನಿಗದಿಯಾಗಿರುವ ಭಾರತ-ಶ್ರೀಲಂಕಾ ನಡುವಿನ ಮೊದಲ ಟ್ವೆಂಟಿ-20 ಪಂದ್ಯವನ್ನು ಬಿಸಿಸಿಐ ಬೇರೆಡೆಗೆ ಸ್ಥಳಾಂತರಗೊಳಿಸಲಿದೆ ಎಂಬ ವದಂತಿ ಕೇಳಿಬರುತ್ತಿದೆ.

ಆದರೆ, ಜ.5ರಂದು ನಿಗದಿಯಾಗಿರುವ ಪಂದ್ಯವು ‘ವೇಳಾಪಟ್ಟಿ ಯಂತೆಯೇ’ ನಡೆಯಲಿದೆ. ಅಸ್ಸಾಂ ಕ್ರಿಕೆಟ್ ಸಂಸ್ಥೆ(ಎಸಿಎ)ಯಾವುದೇ ಸಮಸ್ಯೆಗಳಿಲ್ಲದೆ ಪಂದ್ಯವನ್ನು ಆಯೋಜಿಸುವ ವಿಶ್ವಾಸದಲ್ಲಿದೆ.

  ‘‘ಅಸ್ಸಾಂನ ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಇತರ ಅಂತರ್‌ರಾಷ್ಟ್ರೀಯ ಪಂದ್ಯಗಳಂತೆ ನಾವು ಭದ್ರತೆಗೆ ಸಂಬಂಧಿಸಿ ಅಗತ್ಯದ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಅದನ್ನು ನಾವು ಮಾಡುತ್ತೇವೆ. ನಾವೆಲ್ಲರೂ ಪಂದ್ಯಕ್ಕೆ ಸಕಲರೀತಿಯಲ್ಲೂ ಸಜ್ಜಾಗಿದ್ದೇವೆ’’ಎಂದು ಎಸಿಎ ಕಾರ್ಯದರ್ಶಿ ದೆಬೊಜಿತ್ ಸೈಕಿಯಾ ತಿಳಿಸಿದ್ದಾರೆ. ‘‘ಎಲ್ಲ ವ್ಯವಸ್ಥೆಗಳು ಲಭ್ಯವಿದೆ ಎಂದು ನಾವು ಬಿಸಿಸಿಐಗೆ ಮಾಹಿತಿ ನೀಡಿದ್ದೇವೆ. ನಮಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಪಂದ್ಯದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗುವುದಿಲ್ಲ’’ ಎಂದು ಸೈಕಿಯಾ ತಿಳಿಸಿದರು. ಅಸ್ಸಾಂನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಕಾರಣ ಅಸ್ಸಾಂ ಹಾಗೂ ಸರ್ವಿಸಸ್ ನಡುವೆ ನಡೆಯುತ್ತಿದ್ದ ರಣಜಿ ಟ್ರೋಫಿ ಪಂದ್ಯವನ್ನು ಕೆಲವು ದಿನಗಳ ಕಾಲ ರದ್ದುಪಡಿಸಲಾಗಿತ್ತು. ಆಟಗಾರರು ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು. ಅಸ್ಸಾಂ ಹಾಗೂ ಒಡಿಶಾ ಮಧ್ಯೆ ನಡೆದ ಅಂಡರ್-19 ಕೂಚ್ ಬಿಹಾರ ಪಂದ್ಯವೂ ರದ್ದಾಗಿತ್ತು.

 ಬರ್ಸಪಾರಾ ಸ್ಟೇಡಿಯಂ 2017ರಲ್ಲಿ ಮೊದಲ ಬಾರಿ ಟ್ವೆಂಟಿ-20 ಪಂದ್ಯದ ಆತಿಥ್ಯವಹಿಸಿತ್ತು. ಆಗ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಆಡಿತ್ತು. ಕಳೆದ ವರ್ಷ ಇದೇ ಸ್ಟೇಡಿಯಂನಲ್ಲಿ ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವೆ ಮೊದಲ ಏಕದಿನ ಪಂದ್ಯ ನಡೆದಿತ್ತು. ಈ ವರ್ಷಾರಂಭದಲ್ಲಿ ಭಾರತದ ಮಹಿಳಾ ತಂಡ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯ ಆಡಿತ್ತು. ತಂಡಗಳು ಪಂದ್ಯ ನಡೆಯುವ ಎರಡು ದಿನಗಳ ಮೊದಲು ಗುವಾಹಟಿಗೆ ತಲುಪುವ ಸಾಧ್ಯತೆಯಿದೆ. ಆದರೆ, ಅಸ್ಸಾಂ ಕ್ರಿಕೆಟ್ ಸಂಸ್ಥೆಯು ಬಿಸಿಸಿಐಯಿಂದ ಇನ್ನಷ್ಟೇ ಅಂತಿಮ ವೇಳಾಪಟ್ಟಿಯನ್ನು ಸ್ವೀಕರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News