ಆಸ್ಟ್ರೇಲಿಯ ತಂಡದಲ್ಲಿ ಐವರು ಸ್ಪೆಷಲಿಸ್ಟ್ ಬೌಲರ್‌ಗಳು

Update: 2019-12-26 06:10 GMT

 ಮೆಲ್ಬೋರ್ನ್, ಡಿ.25: ಕ್ರಿಸ್ಮಸ್ ಮರುದಿನ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಎಂದೇ ಖ್ಯಾತಿ ಪಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಐವರು ಸ್ಪೆಷಲಿಸ್ಟ್ ಬೌಲರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ನಾಯಕ ಟಿಮ್ ಪೈನ್ ಬುಧವಾರ ತಿಳಿಸಿದ್ದಾರೆ. ಕಳೆದ ಎರಡು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾದ(ಎಂಸಿಜಿ)ಪಿಚ್ ನಿರ್ಜೀವವಾಗಿ ವರ್ತಿಸಿದ್ದು, ಪಿಚ್‌ನಲ್ಲಿ 20 ವಿಕೆಟ್‌ಗಳನ್ನು ಪಡೆಯಲು ಕಷ್ಟಕರ ಎನಿಸಿತ್ತು. ಈ ತಿಂಗಳು ನಡೆದಿದ್ದ ಶೀಫೀಲ್ಡ್ ಶೀಲ್ಡ್ ಪಂದ್ಯ ಕೂಡ ಅಪಾಯಕಾರಿ ಪಿಚ್ ಎಂಬ ಕಾರಣಕ್ಕೆ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಪಿಚ್ ಪರೀಕ್ಷೆಯ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೈನ್ ಸ್ಪಷ್ಟಪಡಿಸಿದ್ದಾರೆ. ‘‘ಐವರು ಬೌಲರ್‌ಗಳನ್ನು ಕಣಕ್ಕಿಳಿಸಬೇಕೋ, ಬೇಡವೋ ಎಂದು ಗುರುವಾ ನಾವು ನಿರ್ಧರಿಸಲಿದ್ದೇವೆ. ಪಿಚ್ ಬಗ್ಗೆ ನಮಗೇನೂ ಗೊತ್ತಿಲ್ಲ.ಐವರು ಬೌಲರ್‌ಗಳು ಅಥವಾ ಐವರು ಬೌಲರ್‌ಗಳಿಲ್ಲದೆ ಕಣಕ್ಕಿಳಿಯುವ ಕುರಿತು ನಾವು ಯೋಜನೆ ರೂಪಿಸಲಿದ್ದೇವೆ. ನಮ್ಮ ಮನಸ್ಸಿನಲ್ಲಿ ಎರಡು ವಿಭಿನ್ನ ತಂಡಗಳಿರಲಿದ್ದು, ಅಂತಿಮ ನಿರ್ಧಾರವನ್ನು ಪಂದ್ಯದ ದಿನವೇ ತೆಗೆದುಕೊಳ್ಳಲಿದ್ದೇವೆ’’ಎಂದು ಪೈನ್ ಸುದ್ದಿಗಾರರಿಗೆ ತಿಳಿಸಿದರು. ಆಸ್ಟ್ರೇಲಿಯ ಸಾಂಪ್ರದಾಯಿಕವಾಗಿ ಮೂವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಸಹಿತ ನಾಲ್ವರು ಪ್ರಮುಖ ಬೌಲರ್‌ಗಳನ್ನು ಕಣಕ್ಕಿಳಿಸುತ್ತದೆ. ಕ್ರಿಕೆಟ್ ಆಸ್ಟ್ರೇಲಿಯದ ಪ್ರಕಾರ 2013ರಲ್ಲಿ ಶ್ರೀಲಂಕಾ ವಿರುದ್ಧ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯ ಐವರು ಬೌಲರ್‌ಗಳನ್ನು ಕಣಕ್ಕಿಳಿಸಿತ್ತು.

 ಒಂದು ವೇಳೆ ಗುರುವಾರದ ಪಂದ್ಯದಲ್ಲಿ ಆಸೀಸ್ ಐವರು ಬೌಲರ್‌ಗಳನ್ನು ಕಣಕ್ಕಿಳಿಸಿದರೆ, ನೆಸೆರ್ ಜೊತೆಗೆ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ನಥಾನ್ ಲಿಯೊನ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ಆಡಲಿದ್ದಾರೆ. ಆಸ್ಟ್ರೇಲಿಯ ಈ ಬೇಸಿಗೆಯಲ್ಲಿ ಸ್ವದೇಶದಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ನ್ಯೂಝಿಲ್ಯಾಂಡ್ ವಿರುದ್ಧ ಇತ್ತೀಚೆಗೆ ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು 296 ರನ್‌ಗಳಿಂದ ಗೆಲ್ಲುವ ಮೊದಲು ಪಾಕ್ ವಿರುದ್ಧ 2 ಬಾರಿ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News